ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಮೂಲದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂಬುದಕ್ಕೆ ಸಾಕ್ಷಿ. ಈ ಪ್ರಕರಣದಲ್ಲಿ ಸಚಿವರ ಪಾತ್ರವೂ ಇದೆ ಮೃತ ಚಂದ್ರಶೇಖರ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದರಿಂದ ಈ ಘಟನೆಯ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡುವುದೇ ಕಷ್ಟ ಎಂಬುದನ್ನು ಎತ್ತಿ ತೋರಿಸಿದೆ. ಇದು ಸಾವಿನ ಸರ್ಕಾರ ಎಂದು ಹರಿಹಾಯ್ದರು. ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ವಾಲ್ಮೀಕಿ ನಿಗಮದಲ್ಲಿದ್ದ ಸುಮಾರು 187.33 ಕೋಟಿ ರು.ಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲು ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಬೇರೆ ಬೇರೆ ದಿನಾಂಕಗಳಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಸುಮಾರು 177.35 ಕೋಟಿ ರು. ವರ್ಗಾವಣೆ ಮಾಡಬೇಕಾಯಿತು. ಈ ವರ್ಗಾವಣೆ ಮಾಡಲು ಸಚಿವರೊಬ್ಬರಿಂದ ಮೌಖಿಕ ಆದೇಶ ಬಂದಿತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ತಮ್ಮ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಸಚಿವರು ಎಂದರೆ ಮಹಾದೇವಪ್ಪನವರೇ ಎಂದು ಸ್ಪಷ್ಟವಾಗುತ್ತದೆ. ಅವರ ಹೆಸರನ್ನು ನೇರವಾಗಿ ಬರೆಯದಿದ್ದರೂ ಇಲಾಖೆಗೆ ಸಂಬಂಧಪಟ್ಟ ಸಚಿವರು ಅವರೇ ಆಗಿರುವುದರಿಂದ ರಾಜ್ಯ ಸರ್ಕಾರ ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಚಂದ್ರಶೇಖರ್ ತಮ್ಮ ಡೆತ್ ನೋಟ್ ನಲ್ಲಿ ಎಲ್ಲಾ ವಿವರಗಳ ಬರೆದಿಟ್ಟಿದ್ದಾರೆ. ಸುಮಾರು ₹87 ಕೋಟಿ ಅವ್ಯವಹಾರ ಆಗಿದೆ ಎಂದು ಅವರೇ ಹೇಳಿದ್ದಾರೆ. ಆದರೆ ಇಡೀ ಘಟನೆಯನ್ನು ಮತ್ತು ಹಣದ ವರ್ಗಾವಣೆಗಳನ್ನು ನೋಡಿದರೆ 187 ಕೋಟಿಯೂ ಅವ್ಯವಹಾರವಾಗಿದೆ ಎಂಬ ಸಂಶಯ ಉಂಟಾಗುತ್ತದೆ. ಆದ್ದರಿಂದ ಈ ಘಟನೆಯನ್ನು ಉನ್ನತ ತನಿಖೆಗೆ ಒಳಪಡಿಸಬೇಕು. ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇವೆ. ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಎನ್.ಜೆ. ರಾಜಶೇಖರ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ಜಗದೀಶ್, ಶ್ರೀನಾಗ್ ಇದ್ದರು.ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ಮೇಲೆ ಒತ್ತಡ
ಪರಿಶಿಷ್ಟರ ಕಲ್ಯಾಣಕ್ಕಾಗಿ ಈ ನಿಗಮ ಸ್ಥಾಪನೆಯಾಗಿದೆ. ಆದರೆ, ಇಲ್ಲಿನ ಹಣವನ್ನು ಸಮರ್ಥವಾಗಿ ಬಳಸಿಕೊಳ್ಳದೇ ಹೀಗೆ ಭ್ರಷ್ಟಾಚಾರ ನಡೆಸಲಾಗಿದೆ. ವಾಲ್ಮೀಕಿ ಕವಿಗೆ ಅವಮಾನ ಮಾಡಿದಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡವಾಗುತ್ತಿದೆ. ಚಂದ್ರಶೇಖರ್ ಈ ಹಣವನ್ನು ಯಾರು ಯಾರಿಗೆ ಕೊಡಲಾಗಿದೆ ಎಂಬ ಅಧಿಕಾರಿಗಳ ಪಟ್ಟಿಯನ್ನೇ ಬರೆದಿಟ್ಟಿದ್ದಾರೆ. ಎಂಡಿ ಜೆ.ಜೆ.ಪದ್ಮನಾಭ್ ಮತ್ತು ಸಂಗಡಿಗರು, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್‌ನ ಅಧಿಕಾರಿ ಸುಚಿತ್ ಸ್ಮಿತಾ ಮುಂತಾದವರ ಹೆಸರನ್ನು ಡೆತ್ ನೋಟ್ ನಲ್ಲಿ ದಾಖಲಿಸಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.