ಜಂಟಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ನೀಡಿ

KannadaprabhaNewsNetwork |  
Published : Oct 27, 2025, 12:15 AM IST
ಫೋಟೋ 26ಕೆಆರ್‌ಟಿ-1, 1ಎ, 1ಬಿ, ಕಾರಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಅಧಿಕಾರಿಗಳ ತಂಡದೊAದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಎಲ್ಲ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ

ಕಾರಟಗಿ: ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಭತ್ತ ಸೇರಿದಂತೆ ಇನ್ನಿತರ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಕೂಡಲೇ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಕಟ್ಟುನಿಟ್ಟಾಗ ಸೂಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಯರಡೋಣಾ ಮತ್ತು ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಎಲ್ಲ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಕಾರಟಗಿ ತಾಲೂಕಿನ ಸಿದ್ದಾಪುರ, ಯರಡೋಣಾ ಮತ್ತು ಕಾರಟಗಿ ಸೀಮೆಯಲ್ಲಿ ಮಳೆಯಿಂದ ಭತ್ತದ ಬೆಳೆಗೆ ಹಾನಿಯಾಗಿದೆ. ಕಟಾವು ಹಂತಕ್ಕೆ ಬಂದ ಭತ್ತ ಮಕಾಡೆ ಮಲಗಿದ್ದರೆ ತೆನೆ ತುಂಬುವ ಹೊತ್ತಿನಲ್ಲಿ ಕಾಳು ಹಾಳಾಗಿದೆ.

ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ ಸರಿಸುಮಾರು 860 ಹೆಕ್ಟೇರ್ ಕಾರಟಗಿ ಭಾಗದಲ್ಲಿ ಸುಮಾರು 90 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕೆಲವು ಕಡೆ ಭತ್ತದ ತೆನೆ ನೀರಿನಲ್ಲಿ ನೆನೆದು ಮೊಳಗೆ ಒಡೆಯುತ್ತಿದೆ. ಹಲವು ಕಡೆ ಕಟಾವು ಮಾಡದಷ್ಟು ಮಕಾಡೆ ಮಲಗಿದ್ದು, ರೈತರ ಕೈಗೆ ಸಿಗದಂತಾಗಿದೆ. ಕೇವಲ ಗಾಳಿ ಮಳೆ ಹೊಡೆತಕ್ಕೆ ಮಕಾಡೆ ಮಲಗಿದ್ದನ್ನು ಕಾಣಿಸಿದ್ದು ನಷ್ಟವಾಗುವ ಜತೆಗೆ ಮೇಲ್ನೋಟಕ್ಕೆ ಹಚ್ಚ ಹಸಿರಿನಿಂದ ಕಾಣುವಂಥ ಬೆಲೆ ಒಳಗಡೆ ತೆನೆ ತುಂಬು ಹಂತದಲ್ಲಿನ ಭತ್ತ ಸಹ ಸಂಪೂರ್ಣ ಹಾಳಾಗಿರುವುದನ್ನು ರೈತರು ಗಮನಕ್ಕೆ ತಂದಿದ್ದಾರೆ.

ಸಚಿವ ತಂಗಡಗಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ಬೆಳಗ್ಗೆ ಕಿಂದಿಕ್ಯಾಂಪ್, ಯರಡೋಣಾ, ಈಳಿಗನೂರು, ಉಳೇನೂರು, ಸಿದ್ದಾಪುರ ಮತ್ತು ಮುಷ್ಟೂರು ಭಾಗದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರಲ್ಲಿ ಆತಂಕ: ಕೆಲ ಕ್ಯಾಂಪ್ ಮತ್ತು ಹಳ್ಳಿಗಳಿಗೆ ಭೇಟಿ ನೀಡಿದ ವೇಳೆ ರೈತರು ತಮ್ಮ ತಮ್ಮ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಬೆಳೆ ಹಾನಿಯಾಗಿರುವುದನ್ನು ನೋಡ ಬನ್ನಿ ಎಂದು ಸಚಿವರನ್ನು ದುಂಬಾಲು ಬಿದ್ದರು. ಇನ್ನು ಕೆಲವು ಕಡೆ ರೈತರು ಹಾನಿಯಾದ ಭತ್ತ ತಂದು ಯಾವ ರೀತಿಯಲ್ಲಿ ಹಾನಿಯಾಗಿದೆ ಎನ್ನುವ ಸ್ವರೂಪ ಸಚಿವರಿಗೆ ವಿವರಿಸಿದರು. ಇನ್ನು ಐದು ದಿನಕಾಲ ಮಳೆ ಇರುವ ಬಗ್ಗೆ ಹವಮಾನ ಇಲಾಖೆ ವರದಿ ಹೇಳಿದೆ. ಇದೇ ರೀತಿ ಮುಂದುವರೆದರೆ ಅಲ್ಪಸ್ವಲ್ಪ ಬೆಳೆಗೆ ರೋಗ ಹರಡುವ ಸಾಧ್ಯತೆ ಸಹ ಇದೆ ಎನ್ನುವ ಆತಂಕ ರೈತರು ವ್ಯಕ್ತಪಡಿಸಿದರು.

ಸಚಿವರೊಂದಿಗೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಜಿಪಂ ಮಾಜಿ ಅಧ್ಯಕ್ಷ ಎಚ್. ವಿಶ್ವನಾಥ ರೆಡ್ಡಿ, ಬಸವರಾಜ ನೀರಗಂಟಿ, ಚೆನ್ನಬಸಪ್ಪ ಸುಂಕದ, ರೆಡ್ಡಿ ಶ್ರೀನಿವಾಸ, ನಾಗೇಶ ಸಿಂಧನೂರು, ಶರಣೇಗೌಡ ಕೊ. ಪಟೇಲ್ ಸೇರಿದ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!