ನಕಲು ಮುಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿ: ಕಾಂಬಳೆ

KannadaprabhaNewsNetwork | Published : Mar 15, 2025 1:07 AM

ಸಾರಾಂಶ

ಕುಷ್ಟಗಿ ತಾಲೂಕಿನ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 4784 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ರೆಗ್ಯುಲರ್ 4511, ರಿಪಿಟರ್ 273 ಪರೀಕ್ಷಾರ್ಥಿಗಳು ಇದ್ದಾರೆ. ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಯುತ್ತಿದ್ದು ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರ ಸುಸ್ಥಿತಿಯಲ್ಲಿ ಇರಬೇಕು.

ಕುಷ್ಟಗಿ:

ಮಾ. 21ರಿಂದ ಏ. 4ರ ವರೆಗೆ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು ಅಧಿಕಾರಿಗಳು ನಕಲುಮುಕ್ತ ಪರೀಕ್ಷೆ ನಡೆಸಬೇಕೆಂದು ಬಿಇಒ ಸುರೇಂದ್ರ ಕಾಂಬಳೆ ಅವರು ಹೇಳಿದರು.

ಪಟ್ಟಣದ ಗುರುಭವನದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 10ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಸಬೇಕು ಎಂದರು.

ತಾಲೂಕಿನ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 4784 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ರೆಗ್ಯುಲರ್ 4511, ರಿಪಿಟರ್ 273 ಪರೀಕ್ಷಾರ್ಥಿಗಳು ಇದ್ದಾರೆ. ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಯುತ್ತಿದ್ದು ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರ ಸುಸ್ಥಿತಿಯಲ್ಲಿ ಇರಬೇಕು. ಒಂದು ನಿಮಿಷವೂ ಬಂದ್‌ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್‌, ತಾಪಂ ಅಧಿಕಾರಿಗಳು ಮೂಲಭೂತ ಸೌಲಭ್ಯ, ಸಾರಿಗೆ ಇಲಾಖೆ ಸಕಾಲಕ್ಕೆ ಬಸ್‌ ವ್ಯವಸ್ಥೆ, ಕಂದಾಯ ಹಾಗೂ ಜೆಸ್ಕಾಂ ಇಲಾಖೆಗಳ

ಸಹಕಾರ ಅಗತ್ಯವಾಗಿದೆ ಎಂದರು.

ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಪರೀಕ್ಷಾ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಲಾಗುವುದು. ಬಿಇಒ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಮೂಲಕ ಯಾವುದೇ ಅವಘಡ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದರು.

ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಸುಗಮ ಹಾಗೂ ಸುವ್ಯವಸ್ಥೆಯ ಸಲುವಾಗಿ ಅಗತ್ಯ ಪೊಲೀಸ್‌ ಬಂದೋಬಸ್ತ್‌ ಒದಗಿಸಿಕೊಡಲಾಗುವುದು ಎಂದರು.

ಈ ವೇಳೆ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜಗದೀಶಪ್ಪ ಮೇಣೆದಾಳ, ಅಕ್ಷರ ದಾಸೋಹ ಅಧಿಕಾರಿ ಸೋಮನಗೌಡ ಪಾಟೀಲ, ಸಾರಿಗೆ ಡಿಪೋ ಮ್ಯಾನೇಜರ್ ಸುಂದರಗೌಡ ಪಾಟೀಲ, ಕಂದಾಯ ಇಲಾಖೆ ಶಿರಸ್ತೇದಾರ ಅನಂತಕುಮಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಸರಸ್ವತಿ, ನೋಡಲ್ ಅಧಿಕಾರಿ ದಾವಲಸಾಬ್‌ ವಾಲಿಕಾರ, ಜೀವನಸಾಬ್‌ ಬಿನ್ನಾಳ, 15 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್‌ಗಳು, ಸ್ಥಾನಿಕ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ಉಪ ಮುಖ್ಯಅಧೀಕ್ಷಕರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Share this article