ಯಲ್ಲಾಪುರ ರಾಸ್ತಾರೋಖೋ ಹೋರಾಟದ ತಯಾರಿ ವಿವರ ನೀಡಿದ ಸಂಚಾಲಕ ಹರಿಪ್ರಕಾಶ ಕೋಣೆಮನೆ ಅವರು, ಕಳೆದ 15 ದಿನಗಳಲ್ಲಿ ಯಲ್ಲಾಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ಸಂಪರ್ಕಿಸಿದ್ದೇವೆ ಎಂದರು.
ಶಿರಸಿ: ನದಿ ತಿರುವು ಯೋಜನೆ ಕೈಬಿಡಲು ಒತ್ತಾಯಿಸಿ ನ. 3ರಂದು ಯಲ್ಲಾಪುರದಲ್ಲಿ ನಡೆಯುವ ಬೃಹತ್ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಶಾಂತಿಯುತ, ಶಿಸ್ತಿನಿಂದ ನಡೆಯಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ಕರೆ ನೀಡಿದರು.
ತಾಲೂಕಿನ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಮಠದಲ್ಲಿ ಭಾನುವಾರ ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಪಾಲ್ಗೊಳ್ಳಲು ಅ. 27ರಿಂದ ನ. 2ರ ವರೆಗೆ ಎಲ್ಲೆಡೆ ಜನಸಂಪರ್ಕ ಅಭಿಯಾನ ನಡೆಸಲು ಶ್ರೀಗಳು ಸೂಚನೆ ನೀಡಿದರು. ಬೆಂಗಳೂರು ಫ್ರೀಡಂ ಪಾರ್ಕ್ ಧರಣಿ ಬೇಡ್ತಿ ಚಳವಳಿಯನ್ನು ರಾಜ್ಯವ್ಯಾಪಿ ಮಾಡಿದೆ ಎಂದು ಶ್ಲಾಘಿಸಿದರು.ಯಲ್ಲಾಪುರ ರಾಸ್ತಾರೋಖೋ ಹೋರಾಟದ ತಯಾರಿ ವಿವರ ನೀಡಿದ ಸಂಚಾಲಕ ಹರಿಪ್ರಕಾಶ ಕೋಣೆಮನೆ ಅವರು, ಕಳೆದ 15 ದಿನಗಳಲ್ಲಿ ಯಲ್ಲಾಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ಸಂಪರ್ಕಿಸಿದ್ದೇವೆ. ನಗರದಲ್ಲಿ ಎಲ್ಲ ಸಮುದಾಯಗಳ ಸಭೆ ನಡೆಸಿದ್ದು, ಮುಂಡಗೋಡ ತಾಲೂಕಿನ ಹಳ್ಳಿಗಳು, ಅಂಕೋಲಾ ತಾಲೂಕಾದ ಹಳ್ಳಿಗಳಲ್ಲಿ ಸಭೆ ನಡೆಸುತ್ತಿದ್ದೇವೆ. 10000 ಜನರು ನ. 3ರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದರು.ಸಮಿತಿ ಅಧ್ಯಕ್ಷ ಅನಂತ ಅಶೀಸರ ಅವರು, ಅ. 30ರಂದು ಸಿದ್ದಾಪುರದಲ್ಲಿ ಅಘನಾಶಿನಿ ಜೀವವೈವಿಧ್ಯ ಕುರಿತು ತಜ್ಞ ಕಾರ್ಯಾಗಾರ ನಡೆಯಲಿದೆ ಎಂದು ಮಾಹಿತಿ ನೀಡಿದರು. ಎತ್ತಿನಹೊಳೆ ಪ್ರದೇಶಕ್ಕೆ ತಜ್ಞರ ತಂಡ ಭೇಟಿ ನೀಡಲಿದೆ ಎಂದರು.ಸಂಚಾಲಕ ವಿಶ್ವನಾಥ ಶೀಗೇಹಳ್ಳಿ ಅವರನ್ನು ಪತ್ರ ಚಳವಳಿ ಬಿರುಸುಗೊಂಡಿದೆ ಎಂದರು. ಬೇಡ್ತಿ ಗಂಗಾವಳಿ- ಅಘನಾಶಿನಿ ನದಿ ಪೂಜೆ ಗಂಗಾರತಿ ಕಾರ್ಯಕ್ರಮವನ್ನು ಎಲ್ಲೆಡೆ ಗಂಗಾಷ್ಟಮಿಯಿಂದ 15 ದಿನಗಳಲ್ಲಿ ನಡೆಸಲು ನಿರ್ಧರಿಸಲಾಯಿತು.
ಕಾನೂನು ತಜ್ಞರ ಜತೆ ನ. 2ನೇ ವಾರ ಸಮಾಲೋಚನಾ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಲಾಯಿತು. ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ಸತೀಶ್ ಹೆಗಡೆ ಹುಳಗೋಳ, ಸಮಿತಿ ಉಪಾಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ, ಡಾ. ಕೇಶವಕೊರ್ಸೆ, ನಾರಾಯಣ ಭಟ್ರಕೇರಿ, ಜಿ.ಆರ್. ಹೆಗಡೆ ಬೆಳ್ಳಕೇರಿ, ಗಣಪತಿ ಕೆ., ಸುರೇಶ ಹಕ್ಕಿಮನೆ, ಎಂ.ಕೆ. ಭಟ್ ಯಡಳ್ಳಿ, ಮಹೇಶ ಮುಕ್ರಮನೆ ಮುಂತಾದವರು ಪಾಲ್ಗೊಂಡಿದ್ದರು. ಸಂಚಾಲಕರಾದ ಅನಂತ ಹುಳಗೋಲ ಸ್ವಾಗತಿಸಿದರು. ನರಸಿಂಹ ಸಾತೊಡ್ಡಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.