ಜಾಗರೂಕತೆಯಿಂದ ಸಮೀಕ್ಷೆ ಕೈಗೊಳ್ಳಿ

KannadaprabhaNewsNetwork |  
Published : May 04, 2025, 01:37 AM IST
3ಕೆಪಿಎಲ್21 ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆಗಾಗಿ ಗಣತಿದಾರರು ಹಾಗೂ ಮೇಲ್ವಿಚಾರಕರುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ | Kannada Prabha

ಸಾರಾಂಶ

ಪರಿಶಿಷ್ಟ ಜಾತಿಯ ವಿವಿಧ ಉಪಜಾತಿ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ.

ಕೊಪ್ಪಳ: ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ರೀತಿ ಲೋಪವಾಗದಂತೆ ಜಾಗರೂಕತೆಯಿಂದ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ,ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲು ಸಮೀಕ್ಷೆಗಾಗಿ ಗಣತಿದಾರರು ಹಾಗೂ ಮೇಲ್ವಿಚಾರಕರುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಯ ವಿವಿಧ ಉಪಜಾತಿ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ. ಮೀಸಲಾತಿ ಕೊಡಲು ಸೂಕ್ತ ಮಾಹಿತಿ ಇರಬೇಕು. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಎಸ್.ಸಿ.ಯಲ್ಲಿ ಬರುವ 101 ಜಾತಿಗಳಲ್ಲಿ ಯಾವ ಒಂದು ಜಾತಿಗೆ ಅತೀ ಹೆಚ್ಚು ಮೀಸಲಾತಿ ಸಿಕ್ಕಿದೆ ಮತ್ತು ಯಾವ ಜಾತಿಗೆ ಕನಿಷ್ಠ ಮೀಸಲಾತಿ ಸಹ ದೊರಕಿಲ್ಲ ಎನ್ನುವುದನ್ನ ಸ್ಪಷ್ಟವಾಗಿ ತಿಳಿದುಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.

ಸಮೀಕ್ಷೆ ಕೈಗೊಳ್ಳುವ ಗಣತಿದಾರರು ಹಾಗೂ ಮೇಲ್ವಿಚಾರಕರುಗಳು ಸಮೀಕ್ಷೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡು ಅರ್ಥ ಮಾಡಿಕೊಳ್ಳಬೇಕು. ಮನೆ-ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ನಿಮಗೆ ನೀಡಿರುವ 42 ಪ್ರಶ್ನೆಗಳನ್ನು ಕೇಳಬೇಕು. ನಂತರ ಮಾಹಿತಿ ಕೃಡಿಕರಿಸಬೇಕು. ಈ ಸಮೀಕ್ಷೆಯಲ್ಲಿ ಯಾವುದೇ ತೋಂದರೆ ಆಗಬಾರದೆಂಬ ಉದ್ದೇಶದಿಂದ ಒಂದು ಮೊಬೈಲ್ ಆ್ಯಪ್ ಅಪ್ಲಿಕೇಶನ್ ನೀಡಿದ್ದು, ಅದರಲ್ಲಿ ಎಲ್ಲ ಪ್ರಶ್ನೆ ನೀಡಲಾಗಿರುತ್ತದೆ. ಆ್ಯಪ್‌ನಲ್ಲಿನ ಜಾತಿ ಹೆಸರು ಆಂಗ್ಲ ಭಾಷೆಯಲ್ಲಿರುತ್ತದೆ. ಅದಕ್ಕಾಗಿ ತರಬೇತಿ ಬಹಳ ಮುಖ್ಯವಾಗಿದೆ. ಗಣತಿದಾರರು ಹಾಗೂ ಮೇಲ್ವಿಚಾರಕರುಗಳು ಈ ಕಾರ್ಯಾಗಾರದಿಂದ ಹೆಚ್ಚಿನ ವಿಷಯ ತಿಳಿದು ಯಾವುದೇ ರೀತಿ ಲೋಪವಾಗದಂತೆ ಜಾಗರೂಕತೆಯಿಂದ ಸಮೀಕ್ಷೆ ನಡಸಬೇಕು. ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿಯಿದ್ದು, ಯಾವುದೇ ಸಮಸ್ಯೆ ಇದ್ದಲ್ಲಿ ಸಹಾಯವಾಣಿಗೆ ಅಥವಾ ಮಾಸ್ಟರ್ ಟ್ರೆನರ್‌ಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಗಾಗಿ ಮತಗಟ್ಟೆ ಪ್ರದೇಶದವಾರು ಪಟ್ಟಿ ಬಿಡುಗಡೆ ಮಾಡಲಾಗುವುದು. ಅದರಂತೆ ಮತಗಟ್ಟೆಯ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲ ಕುಟುಂಬಗಳ ಸಮೀಕ್ಷೆ ಮಾಡಬೇಕು. ಕೇವಲ ಎಸ್ಸಿ ಜನಾಂಗವಲ್ಲದೆ ಎಲ್ಲ ವರ್ಗದ ಜನರ ಸಮೀಕ್ಷೆ ಕೈಗೊಳ್ಳಬೇಕು. ಈ ಸಮೀಕ್ಷೆಯು ಮೋಬೈಲ್ ಆ್ಯಪ್ ಮೂಲಕವೇ ಮಾಡಬೇಕಾಗಿದ್ದು, ಮ್ಯಾನುವಲ್ ಮೂಲಕ ಸಮೀಕ್ಷೆಗೆ ಅವಕಾಶವಿರುವುದಿಲ್ಲ. ಆ್ಯಂಡ್ರಾಯ್ಡ್ ಮೋಬೈಲ್ 8.0 ವರ್ಷನ್‌ನಲ್ಲೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಮಾಡಲು ಅವಕಾಶವಿದೆ. ಸಮೀಕ್ಷಾ ಸಮಯದಲ್ಲಿ ನಿಮ್ಮ ನಿಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲ ಕುಟುಂಬದವರ ಮನೆ ಮನೆಗೆ ಹೋಗಿ ಖುದ್ದಾಗಿ ಮಾಹಿತಿ ಪಡೆದುಕೊಂಡು ಮಾಹಿತಿ ಕೊಡುವಂತಹ ವ್ಯಕ್ತಿಯ ಫೋಟೋವನ್ನು ಜಿಪಿಎಸ್ ಮಾದರಿ ತೆಗೆದು ಅಪ್‌ಲೋಡ್ ಮಾಡಬೇಕು. ಕುಟುಂಬದ ಮುಖ್ಯಸ್ಥರು ನೀಡುವ ಮಾಹಿತಿ ಸರಿಯಾಗಿ ನಮೂದಿಸಬೇಕು. ಸಮೀಕ್ಷೆದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 5 ರಿಂದ ಮೇ 17ರ ವರೆಗೆ ಬೆಳಗ್ಗೆ 8 ರಿಂದ ಸಂಜೆ 6.30 ರವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕೈಗೊಳ್ಳಬೇಕು. ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರ ಕೈಗೊಂಡು ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಮೇ 19 ರಿಂದ ಮೇ 21ರ ವರೆಗೆ ಸಂಗ್ರಹಿಸಬೇಕು. ಮೇ 19 ರಿಂದ ಮೇ 23ರ ವರೆಗೆ ಕಡ್ಡಾಯವಾಗಿ ಆಧಾರ್ ನಂಬರ್ ಹಾಗೂ ರೇಷನ ಕಾರ್ಡ್ ನಂಬರನೊಂದಿಗೆ ಸ್ವಯಂ ಘೋಷಣೆ (ಆನ್‌ಲೈನ್) ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ಬಿಇಓ ಶಂಕ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಪ್ಪ ಚವ್ಹಾಣ ಹಾಗೂ ಮಾಸ್ಟರ್ ಟ್ರೈನರ್‌ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್