ಕನ್ನಡಪ್ರಭ ವಾರ್ತೆ ವಿಜಯಪುರ
ಇದರ ನೇತೃತ್ವ ವಹಿಸಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಚುನಾವಣೆ ಹಾಗೂ ಮತದಾನ ಪ್ರಜಾಪ್ರಭುತ್ವದ ಮಹತ್ವದ ಅಂಗಗಳು. ಮತದಾನದ ಹಕ್ಕನ್ನು ಖಾತ್ರಿಪಡಿಸುವ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವ ಹಾಗೂ ಜವಾಬ್ದಾರಿಯುತ ಕಾರ್ಯವಾಗಿದೆ. ಈಗ ಸರ್ಚ್, ಐಡೆಂಟಿಟಿ ಹಾಗೂ ಮ್ಯಾಪಿಂಗ್ ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಆರಂಭಗೊಂಡಿದೆ. ಆದರೆ ಈ ಕಾರ್ಯಕ್ಕೆ ನಿಯೋಜಿತಗೊಂಡಿರುವ ಬಿಎಲ್‌ಓಗಳು ವಿವಿಧ ಬಡಾವಣೆಗಳ ಪ್ರತಿ ಮನೆ ಮನೆಗೂ ಭೇಟಿ ನೀಡುತ್ತಿಲ್ಲ ಎಂದು ಆಪಾದಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಈ ಪ್ರಕ್ರಿಯೆ ವಿವಿಧ ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿಯೂ ನಡೆಯಬೇಕಾಗಿರುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಜಯಪುರದಲ್ಲಿ ಬಿಎಲ್‌ಓ ಹಾಗೂ ಬಿಎಲ್‌ಎಗಳು ಪ್ರತಿ ಮನೆ ಮನೆಗೂ ಭೇಟಿ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಎಸ್‌ಐಆರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.ಈ ವೇಳೆ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ರಾಹುಲ್ ಜಾಧವ, ಸಿದ್ದು ಮಲ್ಲಿಕಾರ್ಜುನಮಠ, ವಿಜಯ ಜೋಶಿ ಉಪಸ್ಥಿತರಿದ್ದರು.