ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ವಿಚಾರದಲ್ಲಿ ಪಿಡಿಒಗಳ ನಿರ್ಲಕ್ಷ್ಯ ಸಲ್ಲದು. ರಸ್ತೆ, ಸ್ಮಶಾನ ಅಭಿವೃದ್ಧಿ, ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನು ಯೋಜನೆಯಡಿ ಹಾಕಿಕೊಂಡು ನಿರ್ವಹಿಸಬೇಕು.
ಹಾನಗಲ್ಲ: ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ವಾರ್ಡು ಸಭೆ, ಗ್ರಾಮಸಭೆ, ಮಹಿಳಾ, ಯುವ ಮತ್ತು ಮಕ್ಕಳ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಕ್ರಮ ಕೈಗೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ತಾಪಂ ಇಒ ಪರಶುರಾಮ ಪೂಜಾರ ಅವರಿಗೆ ಸೂಚಿಸಿದರು.
ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ತಾಪಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನಿಯಮಿತವಾಗಿ ಸಭೆ ನಡೆಸದ ಬಗ್ಗೆ ದೂರುಗಳಿದ್ದು, ಎಲ್ಲೆಲ್ಲಿ ಸಭೆ ನಡೆಸಿಲ್ಲ ಎನ್ನುವ ಕುರಿತು ಮಾಹಿತಿ ನೀಡಿ ಎಂದು ಸೂಚಿಸಿದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ವಿಚಾರದಲ್ಲಿ ಪಿಡಿಒಗಳ ನಿರ್ಲಕ್ಷ್ಯ ಸಲ್ಲದು. ರಸ್ತೆ, ಸ್ಮಶಾನ ಅಭಿವೃದ್ಧಿ, ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನು ಯೋಜನೆಯಡಿ ಹಾಕಿಕೊಂಡು ನಿರ್ವಹಿಸಬೇಕು. ಈ ವಿಚಾರದಲ್ಲಿ ಸಮುದಾಯದ ಸಹಕಾರ ಪಡೆಯಿರಿ ಎಂದು ಸೂಚಿಸಿದರು.ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾದಲ್ಲಿ ವಾಸವಿರುವ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಉಪಗ್ರಾಮ ರಚಿಸಬೇಕು. ಗ್ರಾಮ ಪಂಚಾಯಿತಿವಾರು ಪಟ್ಟಿ, ಸಮಗ್ರ ಮಾಹಿತಿ ಸಿದ್ಧಪಡಿಸಿ ತಹಸೀಲ್ದಾರ್ ಮೂಲಕ ಪ್ರಸ್ತಾವನೆ ಸಲ್ಲಿಸಿ ಎಂದು ಶ್ರೀನಿವಾಸ ಮಾನೆ ಸೂಚನೆ ನೀಡಿದರು.ಈ ಹಿಂದೆ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಕುರಿತಾಗಿ ಅನುಪಾಲನಾ ವರದಿಗಳನ್ನು ಇಲಾಖಾವಾರು ಪಡೆದು ಕೂಡಲೇ ಸಲ್ಲಿಸಿ. ಪ್ರಗತಿ ಸಾಧಿಸದ, ಸೂಚನೆ ಪಾಲಿಸದ ಇಲಾಖೆಗಳ ಮಾಹಿತಿ ಸಂಗ್ರಹಿಸಿ ಎಂದರು.ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನೂ ಇತ್ಯರ್ಥಪಡಿಸಿ, ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಿ ಎಂದು ಶ್ರೀನಿವಾಸ ಮಾನೆ ಸೂಚಿಸಿದರು. ಯೋಜನಾಧಿಕಾರಿ ಚಂದ್ರಶೇಖರ ಸೂಡಂಬಿ ಹಾಗೂ ಅಧಿಕಾರಿಗಳು ಇದ್ದರು.ಇಂದು ಕಾಲಭೈರವೇಶ್ವರ ದೇಗುಲದ ವಾರ್ಷಿಕೋತ್ಸವ
ಹಾನಗಲ್ಲ: ತಾಲೂಕಿನ ಹಳೆಗೆಜ್ಜಿಹಳ್ಳಿ ಗ್ರಾಮದಲ್ಲಿ ಕಾಲಭೈರವೇಶ್ವರ ದೇವಸ್ಥಾನದ ೬ನೇ ವಾರ್ಷಿಕೋತ್ಸವ ಸಮಾರಂಭ ಫೆ. ೧೮ರಂದು ನಡೆಯಲಿದೆ.ಬೆಳಗ್ಗೆ ೭ ಗಂಟೆಗೆ ವಿಜಯಪುರ ಜಿಲ್ಲೆಯ ಬಳಬಟ್ಟಿ ಗ್ರಾಮದ ಗೋರಕ್ಷನಾಥ ಜೋಗಿಮಠದ ಯೋಗಿ ನಿವೃತ್ತಿನಾಥಜೀ ಅವರ ನೇತೃತ್ವದಲ್ಲಿ ಕಾಲ ಭೈರವೇಶ್ವರನಿಗೆ ಅಘೋರಿ ಹೋಮ ನಡೆಯಲಿದೆ. ಬಳಿಕ ಪಂಚಾಮೃತ ಅಭಿಷೇಕ ನೆರವೇರಲಿದೆ. ಮಧ್ಯಾಹ್ನ ೧೨ ಗಂಟೆಗೆ ಗ್ರಾಮದ ಬೀದಿಗಳಲ್ಲಿ ಕಾಲ ಭೈರವೇಶ್ವರ ದೇವರ ಉತ್ಸವ ಜರುಗಲಿದೆ. ಇದೇ ಸಂದರ್ಭದಲ್ಲಿ ನಡೆಯುವ ಧರ್ಮಸಭೆಯಲ್ಲಿ ಚಂದ್ರಗುತ್ತಿ ಕಾಲ ಭೈರವೇಶ್ವರ ಮಠದ ಸುಖದೇವನಾಥ ಮಹಾರಾಜ ಅವರು ಆಶೀರ್ವಚನ ನೀಡಲಿದ್ದಾರೆ. ಗ್ರಾಮದ ನಿಂಗಪ್ಪ ಜೋಗಿ ಅಧ್ಯಕ್ಷತೆ ವಹಿಸುವರು. ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವಾಜಿ ಮಧೂರಕರ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.