ಕೊಪ್ಪಳ: ಪವನ ಶಕ್ತಿ ಕೆಲಸ ರೈತರ ಜಮೀನುಗಳಿಗೆ ಸಮಸ್ಯೆಗಳಾಗದಂತೆ ನಿರ್ವಹಿಸುವುದರ ಜತೆಗೆ ಅವರ ಸಮಸ್ಯೆಗಳಿಗೆ ತಕ್ಷಣ ಕಂಪನಿಯವರು ಸ್ಪಂದಿಸಬೇಕು ಎಂದು ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ಗ್ರಾಮೀಣ ರಸ್ತೆಗಳಲ್ಲಿ 60 ರಿಂದ 70 ಟನ್ ಭಾರದ ಭಾರೀ ವಾಹನ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿರುವುದರ ಜತೆಗೆ ರೈತರ ಜಮೀನುಗಳಿಗೂ ಸಮಸ್ಯೆಗಳಾಗುತ್ತಿವೆ. ಸಂಬಂಧಿಸಿದ ಕಂಪನಿಯವರು ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಅವುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ನಮಗೆ ವಿಂಡ್ ಎನರ್ಜಿ ಬೇಕು. ಹಾಗಂತ ತಮ್ಮ ಮನಸ್ಸಿಗೆ ಬಂದಂತೆ ಮಾಡುವುದಲ್ಲ. ಜನರಿಗೆ ಏನಾದರೂ ಸಮಸ್ಯೆಗಳಾದರು ಅವರು ಮೊದಲು ಕೇಳುವುದು ನಮಗೆ, ನಿಮಗಲ್ಲ ಎಂದು ವಿಂಡ್ ಎನರ್ಜಿ ಕಂಪನಿಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕರಿಗೆ ಹೇಳಿದರು.
ತಾವು ಎಷ್ಟು ಫ್ಯಾನ್ ಹಾಕಲು ಪರ್ಮಿಶನ್ ಪಡೆದಿದ್ದೀರಾ, ಎಷ್ಟು ಹಾಕುತ್ತಿದ್ದೀರಾ ಎನ್ನುವ ಮಾಹಿತಿ ನೀಡಬೇಕು.ಇದಕ್ಕಾಗಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಿ.ಆರ್.ಇ.ಡಿ, ಪೊಲೀಸ್, ಜೆಸ್ಕಾಂ, ಅರಣ್ಯ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಒಂದು ಸಮಿತಿ ರಚಿಸಿ ಕಂಪನಿಯವರು ಪಡೆದ ಅನುಮತಿ ಪರಿಶೀಲಿಸುವುದರ ಜತೆಗೆ ಸಿಎಸ್‌ಆರ್ ಅನುದಾನದಲ್ಲಿ ಹಾಳಾದ ರಸ್ತೆ ಎಷ್ಟು ಸರಿಯಾಗಿ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಆದಷ್ಟು ಬೇಗನೆ ಇನ್ನೊಂದು ಸಭೆ ಕರೆಯಲಿದ್ದು ಆ ಸಭೆಯಲ್ಲಿ ಇಲ್ಲಿಯವರೆಗೆ ಜಿಲ್ಲೆಯ ಎಲ್ಲೆಲ್ಲಿ ರೈತರ ದೂರು ಬಂದಿವೆ ಎನ್ನುವ ಕುರಿತು ಮಾಹಿತಿ ಕೊಡಬೇಕು ಹಾಗೂ ಎಲ್ಲ ಕಂಪನಿಯವರು ಸಮಗ್ರ ಮಾಹಿತಿಯೊಂದಿಗೆ ತಪ್ಪದೆ ಸಭೆಗೆ ಹಾಜರಿರಬೇಕೆಂದು ಹೇಳಿದರು.ವಿಧಾನಸಭೆ ಮುಖ್ಯ ಸಚೇತಕರು ದೊಡ್ಡನಗೌಡ ಪಾಟೀಲ ಮಾತನಾಡಿ, ವಿಂಡ್ ಎನರ್ಜಿಯ ಭಾರೀ ವಾಹನ ಸಂಚಾರದಿಂದ ರಸ್ತೆಗಳು ಎಷ್ಟು ಹಾಳಾಗಿವೆ ಎಂದರೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ತಗೊಂಡು ಹೋಗಲಿಕ್ಕೂ ಆಗದ ಪರಿಸ್ಥಿತಿ ಬಂದಿದೆ.ವಾಹನಗಳು ಹೊಲದಲ್ಲಿ ಸಂಚರಿಸುತ್ತಿರುವುದರಿಂದ ಧೂಳಿನಿಂದ ಬೆಳೆಗಳು ಹಾಳಾಗಿವೆ. ಈ ಕುರಿತು ಮೊನ್ನೆ ನಾಗರಾಳ ಗ್ರಾಮದಲ್ಲಿ ಗಲಾಟೆಯಾಯಿತು. ರಸ್ತೆಗಳು ಹಾಳಾಗುತ್ತಿರುವುದರಿಂದ ರೈತರು ದಿನಾಲು ಗೋಳಿಡುತ್ತಾರೆ. ಫ್ಯಾನ್ ಹಾಕಲು ಎಷ್ಟು ಪರ್ಮಿಷನ್ ಪಡೆದಿದ್ದಾರೆ ಎನ್ನುವ ಮಾಹಿತಿ ನಮಗೆ ಬೇಕು. ನಾನು ಈ ಕುರಿತು ಬರುವ ಅಧಿವೇಶನದಲ್ಲಿ ಧ್ವನಿ ಎತ್ತದೆ ಬಿಡಲ್ಲ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಜಿಪಂ ಸಿಇಓ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ವಿಂಡ್ ಎನರ್ಜಿ ಕಂಪನಿಗಳ ಮುಖ್ಯಸ್ಥರು/ ವ್ಯವಸ್ಥಾಪಕರು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.