ಗಂಗಾವತಿ ತಾಲೂಕು ಕಲಗುಡಿ ಗ್ರಾಮದ 16 ರೈತರ 12.5 ಎಕರೆಯನ್ನು ರೈಲ್ವೆ ನಿಲ್ದಾಣಕ್ಕೆ 2017ರಲ್ಲಿ ರೈಲ್ವೆಯು ಭೂ ಸ್ವಾಧೀನ ಪಡಿಸಿಕೊಂಡಿತ್ತು.
ಹುಬ್ಬಳ್ಳಿ:
ರೈಲ್ವೆ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಪಾವತಿಸದ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಕಚೇರಿ ವ್ಯಾಪ್ತಿಯ ಕನಸ್ಟ್ರಕ್ಷನ್ ವಿಭಾಗದ ಕಚೇರಿಯ ಪೀಠೋಪಕರಣಗಳನ್ನು ರೈತರು ಕೋರ್ಟ್ ಆದೇಶದಂತೆ ವಶಪಡಿಸಿಕೊಂಡಿದ್ದಾರೆ.ಗಂಗಾವತಿ ತಾಲೂಕು ಕಲಗುಡಿ ಗ್ರಾಮದ 16 ರೈತರ 12.5 ಎಕರೆಯನ್ನು ರೈಲ್ವೆ ನಿಲ್ದಾಣಕ್ಕೆ 2017ರಲ್ಲಿ ರೈಲ್ವೆಯು ಭೂ ಸ್ವಾಧೀನ ಪಡಿಸಿಕೊಂಡಿತ್ತು. ಈ ವೇಳೆ ಕೃಷಿಭೂಮಿ ಎಂದು ಎಕರೆಗೆ 18 ಲಕ್ಷ ರೂ. ಪರಿಹಾರ ಪ್ರಕಟಿಸಿತ್ತು. ಆದರೆ, ಇದು ಕೃಷಿ ಭೂಮಿಯಲ್ಲ ಕೃಷಿಯೇತರ ಭೂಮಿ ವ್ಯಾಪ್ತಿಗೊಳಪಡುತ್ತದೆ. ಹಾಗಾಗಿ ಕೃಷಿಯೇತರ ಭೂಮಿ ಬೆಲೆಯ ಪರಿಹಾರ ನೀಡುವಂತೆ ರೈತರು ಕೋರಿ ರೈತರು ಕೊಪ್ಪಳ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿತ್ತು, ಕೋರ್ಟ್ ಚದುರ ಅಡಿಗೆ 800 ರೂ.ಗಳಂತೆ ಪರಿಹಾರ ನೀಡುವಂತೆ ರೈತರ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರೈಲ್ವೆಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿತ್ತು. ಆದರೆ, ಕೋರ್ಟ್ ಪರಿಹಾರ ಮೊತ್ತದ ಶೇ.50ರಷ್ಟನ್ನು ಠೇವಣಿ ಇಡುವಂತೆ ನಿರ್ದೇಶಿಸಿತ್ತು. ಅದನ್ನು ರೈಲ್ವೆ ಪಾಲಿಸಲಿಲ್ಲ.
ಹೀಗಾಗಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆದೇಶ ಅನುಷ್ಠಾನಕ್ಕೆ ರೈತರು ಒತಾಯಿಸಿದ್ದರು. ಈ ವೇಳೆ ಮೂರು ಬಾರಿ ಕಾಲಾವಕಾಶ ಕೇಳಿದ್ದ ರೈಲ್ವೆಯು ಪರಿಹಾರ ನೀಡಲಿಲ್ಲ. ಅಂತಿಮವಾಗಿ ಅನುಷ್ಠಾನ ವಿಳಂಬವಾಗಿದ್ದು, ಕ್ರಮಕೈಗೊಳ್ಳುವಂತೆ ರೈತರು ಮತ್ತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಕಚೇರಿ ಹುಬ್ಬಳ್ಳಿಯಲ್ಲಿರುವ ಕಾರಣಕ್ಕೆ ಹುಬ್ಬಳ್ಳಿಯ 5ನೇ ಜಿಲ್ಲಾ ನ್ಯಾಯಾಲಯದ ಮೂಲಕ ಎಕ್ಸಿಕ್ಯುಷನ್ ಕೇಸ್‌ನಲ್ಲಿ ಜಪ್ತಿ ಆದೇಶ ಪಡೆದುಕೊಂಡು ರೈಲ್ವೆ ಕನಸ್ಟ್ರಕ್ಷನ್ ಕಚೇರಿ ಕಂಪ್ಯೂಟರ್ ಸೇರಿದಂತೆ ಪೀಠೋಪಕರಣ ಜಪ್ತಿ ಮಾಡಲಾಯಿತು ಎಂದು ನ್ಯಾಯವಾದಿ ಎಸ್.ಎಚ್. ಸುರಪುರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.