ನಗರದಲ್ಲಿ ಏ 26ರಂದು 6 ನೇ ಜಿಲ್ಲಾ ಜಾನಪದ ಸಮ್ಮೇಳನ । ಆಹ್ವಾನ ಪತ್ರಿಕೆ ಬಿಡುಗಡೆ
- ಮಾನವೀಯ ಮೌಲ್ಯಗಳು, ಸಂಬಂಧಗಳು, ಸಂವೇದನೆಗಳನ್ನು ಪುನರುಜ್ಜೀವನಕ್ಕೆ ಪೂರಕ
- ಜಿಲ್ಲೆಯ ಜಾನಪದ ಕಲಾವಿದರಿಗೆ ಕಲೆಗಳ ಪ್ರದರ್ಶನಕ್ಕೆ ಸಮ್ಮೇಳನದಲ್ಲಿ ವೇದಿಕೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದಿಂದ ನಗರದಲ್ಲಿ ಏ 26ರಂದು ಹಮ್ಮಿಕೊಂಡಿರುವ 6 ನೇ ಜಿಲ್ಲಾ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬುಧವಾರ ಪ್ರವಾಸಿ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಈ ನೆಲದ ಮೂಲ ಬೇರು. ಜಾನಪದ ಅನಕ್ಷರಸ್ಥರಿಂದ ಹುಟ್ಟಿ, ಬಾಯಿಂದ ಬಾಯಿಗೆ ಹರಿದು ಬರುವ ಮೂಲಕ ಇದುವರೆಗೆ ಉಳಿದು ಬೆಳೆದು ಬಂದಿದೆ. ನಮ್ಮ ಹಿರಿಯರು ತಮ್ಮ ಶ್ರಮದ ಬದುಕಿನ ನಡುವೆ ಜಾನಪದವನ್ನು ಕಟ್ಟಿ ಬೆಳೆಸಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಲೇಬೇಕಾದ ಅನಿವಾರ್ಯತೆ ಮತ್ತು ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಸಮ್ಮೇಳನದ ಯಶಸ್ಸಿಗೆ ಎಲ್ಲರೂ ದುಡಿಯಬೇಕು. ಗ್ರಾಮೀಣರು ಮತ್ತು ಯುವ ಜನತೆ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.
ಮಾನವೀಯ ಮೌಲ್ಯಗಳು, ಸಂಬಂಧಗಳು, ಸಂವೇದನೆಗಳನ್ನು ಪುನರುಜ್ಜೀವನಗೊಳಿಸಬೇಕಾದರೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯತ್ತ ನಾವು ಮತ್ತೆ ಹೊರಳ ಬೇಕು, ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಏ.26 ರಂದು ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ 6ನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ, ಬೋರಲಿಂಗಯ್ಯ ಸೇರಿದಂತೆ ನಾಡಿನ ಹಿರಿಯ ಜಾನಪದ ಕಲಾವಿದರು, ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಜಾನಪದ ಕಲಾವಿದರಿಗೆ ಕಲೆಗಳ ಪ್ರದರ್ಶನಕ್ಕೆ ಸಮ್ಮೇಳನದಲ್ಲಿ ವೇದಿಕೆ ಕಲ್ಪಿಸಲಾಗುವುದು, ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಿ, ಗೌರವಿಸಲಾಗುವುದು, ಜಾನಪದ ಸಿರಿ ಪ್ರಶಸ್ತಿ ನೀಡಲಾಗುವುದು, ರೈತ ಜಾನಪದ, ಮಹಿಳಾ ಜಾನಪದ, ಜಾನಪದರ ಜಗುಲಿ, ವಿಷಯ ಕುರಿತ ಗೋಷ್ಠಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
4ನೇ ಜಿಲ್ಲಾ ಜಾನಪದ ಸಮ್ಮೇಳನದ ಅಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಚಾಲಕಿ ಗಾಯತ್ರಿ, ಜಿಲ್ಲಾ ಸಂಚಾಲಕ ಬಕ್ಕಿ ರವಿ, ಉಪಾಧ್ಯಕ್ಷ ತಿಪ್ಪೇಶ್, ಶೈಲಾ ಬಸವರಾಜ್, ತಾಲೂಕು ಅಧ್ಯಕ್ಷ ಸಚಿನ್ ಸಿಂಗ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರ, ಉಪಾಧ್ಯಕ್ಷೆ ಅನ್ನಪೂರ್ಣ, ಎಂ.ಎಸ್.ನಾಗರಾಜ್, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕುನ್ನಳ್ಳಿ ರವಿ, ವಿನೀತ್ ಕುಮಾರ್, ಸಖರಾಯಪಟ್ಟಣ ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.