ಹೊಸಪೇಟೆ: ರಾಜ್ಯದ ಮಹಾ ಜನತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ 2023ರಲ್ಲಿ ಭಾರೀ ಬಹುಮತ ನೀಡಿ ದೊಡ್ಡ ಸಂದೇಶ ನೀಡಿದ್ದಾರೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಹಾಗಾಗಿ ಈ ಭಾಗದಲ್ಲಿ ಸರ್ಕಾರದ ಎರಡು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಮೇ 20ರಂದು ಸಮರ್ಪಣೆ ಸಂಕಲ್ಪ ಸಮಾವೇಶ ನಡೆಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ರಾಜ್ಯ ಸರ್ಕಾರ ಅಭಿವೃದ್ಧಿ ಪರವಾಗಿದ್ದು, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡಿದ್ದೇವೆ. ಪಂಚ ಗ್ಯಾರಂಟಿಗಳ ಜತೆಗೆ ಹೊಸ ಯೋಜನೆಗಳನ್ನು ಕೂಡ ಜಾರಿ ಮಾಡುತ್ತಿದ್ದೇವೆ ಎಂದರು.
ಗೇಟ್‌ಗಳ ಬದಲಾವಣೆ: ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಲಾಗುವುದು. ಈಗಾಗಲೇ ತಾಂತ್ರಿಕ ಸಮಿತಿ ಪರಿಶೀಲನೆ ನಡೆಸಿ ವರದಿ ಕೂಡ ಸಲ್ಲಿಸಿದೆ. ತುಂಗಭದ್ರಾ ಮಂಡಳಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮೂರು ರಾಜ್ಯಗಳು ಸೇರಿ ಗೇಟ್‌ಗಳ ಬದಲಾವಣೆಗೆ ಅನುದಾನ ಒದಗಿಸುತ್ತೇವೆ ಎಂದರು.ತುಂಗಭದ್ರಾ ಜಲಾಶಯದಲ್ಲಿ ನೀರು ನಿಲ್ಲಿಸಲು ಕಷ್ಟವಾಗಿದೆ. ಹಾಗಾಗಿ ನೀರು ಉಳಿಸಿಕೊಳ್ಳೋಕೆ, ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಬಸವಸಾಗರ ಜಲಾಶಯಕ್ಕೆ ನೀರು ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ನಾವು ರೈತರಿಗಾಗಿ ನೀರು ಉಳಿಸುವ ಕೆಲಸ ಮಾಡುತ್ತೇವೆ ಎಂದರು.
ಆಪರೇಷನ್ ಸಿಂದೂರ ಕುರಿತು ಶಾಸಕ ಕೊತ್ತನೂರು ಮಂಜುನಾಥ ನೀಡಿರುವ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮಂಜುನಾಥರನ್ನು ಪ್ರಶ್ನಿಸುವೆ. ಆಪರೇಷನ್ ಸಿಂದೂರ ಕುರಿತು ನಾನು ಹೆಚ್ಚಿಗೆ ಮಾತನಾಡಲಾರೆ ಎಂದರು.
ಹೊಸಪೇಟೆ ಭಾಗದಲ್ಲಿ ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಾಧ್ಯವಿಲ್ಲ. ಖಾಸಗಿಯವರು ಮುಂದೆ ಬಂದರೆ ಸ್ಥಾಪನೆ ಮಾಡಲು ಸಹಕರಿಸುತ್ತೇವೆ. ಈ ಹಿಂದಿನ ಸರ್ಕಾರದಲ್ಲಿ ಈ ಸಂಬಂಧ ಏನಾಗಿದೆ ಎಂದು ಪರಿಶೀಲಿಸುತ್ತೇವೆ ಎಂದರು.