ರಾಜ್ಯ ಪತ್ರಕರ್ತರ ಸಮ್ಮೇಳನ; ವೈಭವದ ಮೆರವಣಿಗೆ

KannadaprabhaNewsNetwork | Published : Feb 4, 2024 1:34 AM

ಸಾರಾಂಶ

ಜಯದೇವ ವೃತ್ತದಿಂದ ಆರಂಭವಾದ ಪತ್ರಕರ್ತರ ಸಮ್ಮೇಳನದ ಮೆರವಣಿಗೆ ವೈಭವದಿಂದ ನಗರದ ರಾಜ ಬೀದಿಗಳಲ್ಲಿ ಸಾಗಿತು. ಮೆರವಣಿಗೆ ಜೊತೆಗೆ ಸಾರೋಟಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪರನ್ನು ಬೆಳ್ಳಿ ರಥದಲ್ಲಿ ಗೌರವ ಪೂರ್ವಕವಾಗಿ ಕಾರ್ಯಕ್ರಮ ನಡೆಯುವ ಸ್ಥಳವಾದ ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದ ಆವರಣಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಬೆಣ್ಣೆ ದೋಸೆ ಮತ್ತು ಖಾರ ಮಂಡಕ್ಕಿ ಘಮಲು ರಾಜ್ಯಾದ್ಯಂತ ಪಸರಿಸಿದಂತೆ ನಗರದಲ್ಲಿ ಎರಡು ದಿನ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಕಂಪು ನಗರದಲ್ಲಿ ಪಸರಿಸಲು ಜಯದೇವ ವೃತ್ತದಲ್ಲಿ ಶನಿವಾರ ಪತ್ರಕರ್ತರ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಹಾನಗರ ಪಾಲಿಕೆ ಮೇಯರ್‌ ವಿನಾಯಕ್ ಪೈಲ್ವಾನ್ ಜೊತೆಗೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಡೊಳ್ಳು ಬಾರಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಹುಬ್ಬಳ್ಳಿಯ ಸಿದ್ಧರೂಢ ಸಂಘದ 10 ಮಂದಿ ಕಲಾವಿದರು ಜಗ್ಗಲಿಗೆ, ನ್ಯಾಮತಿಯ ರಾಜ ವೀರಮದಕರಿ ಡೊಳ್ಳಿನ ಸಂಘದ 12 ಜನರು ಪುರುಷರ ಡೊಳ್ಳು ಕುಣಿತ, ಹರಿಹರ ತಾಲೂಕಿನ ಗುತ್ತೂರಿನ ಕಲಾಶ್ರೀ ಸಂಘದ ವೀರೇಶ್ ಕುಮಾರ್ ನೇತೃತ್ವದಲ್ಲಿ 13 ಮಂದಿ ಹಗಲುವೇಷ ತಂಡದಿಂದ ರಾಮಾಯಣ, ಸಾಗರದ ಹೆಗ್ಗೋಡಿನ ಸಿಗಂಧೂರು ಚೌಡೇಶ್ವರಿ ಮಹಿಳಾ ಡೊಳ್ಳು ಕಲಾ ತಂಡದ ಅಧ್ಯಕ್ಷರಾದ ಶಾಂತಾ, ಶಶಿಕಲಾ, ಪದ್ಮಶ್ರೀ, ದಿವ್ಯ, ಪವಿತ್ರ, ಪೂಜಾ, ವೈಶಾಲಿ, ಲಕ್ಷ್ಮೀ ಅವರ ಮಹಿಳಾ ತಂಡದಿಂದ ಮಹಿಳಾ ಡೊಳ್ಳುಕುಣಿತ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಚಲ್ಲೂರು ಗ್ರಾಮದ ಬಯಲು ಆಂಜನೇಯ ಸ್ವಾಮಿ ಸಾಂಸ್ಕೃತಿಕ ಕಲಾತಂಡದ 10 ಯುವಕರು ಗರಡಿ ಬೊಂಬೆ ಕುಣಿತ ಮೆರವಣಿಗೆಗೆ ಮೆರುಗು ತಂದವು.

ಸಾರೋಟಿನಲ್ಲಿ ಗಣ್ಯ ಸಾರಥಿಗಳು :

ಜಯದೇವ ವೃತ್ತದಿಂದ ಆರಂಭವಾದ ಪತ್ರಕರ್ತರ ಸಮ್ಮೇಳನದ ಮೆರವಣಿಗೆ ವೈಭವದಿಂದ ನಗರದ ರಾಜ ಬೀದಿಗಳಲ್ಲಿ ಸಾಗಿತು. ಮೆರವಣಿಗೆ ಜೊತೆಗೆ ಸಾರೋಟಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪರನ್ನು ಬೆಳ್ಳಿ ರಥದಲ್ಲಿ ಗೌರವ ಪೂರ್ವಕವಾಗಿ ಕಾರ್ಯಕ್ರಮ ನಡೆಯುವ ಸ್ಥಳವಾದ ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದ ಆವರಣಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ಸುದ್ದಿ ಬಂಡಿ :

ದೃಶ್ಯಕಲಾ ಮಹಾವಿದ್ಯಾಲಯದ ಬೋಧನ ಸಹಾಯಕರಾದ ಕೆ.ವಿ.ಪ್ರಮೋದ್, ಎ.ನವೀನ್ ಕುಮಾರ್, ವಿದ್ಯಾರ್ಥಿಗಳಾದ ದರ್ಶನ್, ವಿನೋದ್, ಮದನ್ ಅವರು ಮೆರವಣಿಗೆಯಲ್ಲಿ ಮಾಧ್ಯಮ ವೃಕ್ಷವನ್ನು ನಿರ್ಮಿಸಿದ್ದು ಮೆರವಣಿಗೆಗೆ ರಂಗು ತಂದಿತು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸುದ್ದಿ ಪತ್ರಿಕೆಗಳ ಮತ್ತು ದೃಶ್ಯ ಮಾಧ್ಯಮಗಳು ಬೆಳೆದಿರುವುದನ್ನು ಎತ್ತಿನ ಬಂಡಿಯ ಮೇಲೆ ಕಲ್ಪವೃಕ್ಷದಲ್ಲಿ ಸೃಷ್ಟಿಸಿ ಅವುಗಳ ನಾಮ ಫಲಕಗಳ ಮೂಲಕ ತೋರಿಸಿದ್ದು ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಾಮದೇಪ್ಪ, ಕನ್ನಡಪರ ಸಂಘಟನೆಗಳ ಮುಖಂಡರಾದ ನಾಗೇಂದ್ರ ಬಂಡೀಕರ್, ಕೆ.ಜಿ.ಶಿವಕುಮಾರ್ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದ ಪತ್ರಕರ್ತ ಮಿತ್ರರು ಭಾಗವಹಿಸಿದ್ದರು.

Share this article