ನದಿ ಜೋಡಣೆ ವಿರುದ್ಧ ಇಂದು ಸಮಾವೇಶ

KannadaprabhaNewsNetwork |  
Published : Jan 11, 2026, 02:45 AM IST
ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಬೃಹತ್‌ ವೇದಿಕೆ. | Kannada Prabha

ಸಾರಾಂಶ

ಜಿಲ್ಲೆಯ ಜನರ ಜೀವ ನದಿಯಾಗಿ ಕೃಷಿಕರ ಬದುಕಿನ ಜತೆ ನಂಟು ಹೊಂದಿರುವ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯ ವಿರುದ್ಧ ಜ.11 ರಂದು ಮಧ್ಯಾಹ್ನ 2.30ರಿಂದ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡ ಬೃಹತ್‌ ಜನ ಸಮಾವೇಶಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.

ಜನ ಸಮಾವೇಶಕ್ಕೆ ಸಿದ್ಧತೆ ಪೂರ್ಣ

ಸುಮಾರು 20 ಸಾವಿರ ಜನರು ಸೇರುವ ನಿರೀಕ್ಷೆ

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲೆಯ ಜನರ ಜೀವ ನದಿಯಾಗಿ ಕೃಷಿಕರ ಬದುಕಿನ ಜತೆ ನಂಟು ಹೊಂದಿರುವ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯ ವಿರುದ್ಧ ಜ.11 ರಂದು ಮಧ್ಯಾಹ್ನ 2.30ರಿಂದ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡ ಬೃಹತ್‌ ಜನ ಸಮಾವೇಶಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುಮಾರು 20 ಸಾವಿರ ಜನರು ಪಾಲ್ಗೊಂಡು ಯೋಜನೆ ವಿರುದ್ಧ ಜನಾಂದೋಲನ ರೂಪಿಸಲಿದ್ದಾರೆ.ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಬೃಹತ್‌ ವೇದಿಕೆ ಪೂರ್ಣಗೊಂಡಿದೆ. ವಿಶಾಲ ಜಾಗಕ್ಕೆ ಫೆಂಡಾಲ್‌ ಹಾಕಿ ಸುಮಾರು 6 ಸಾವಿರ ಜನರಿಗೆ ಕುಳಿತು ಕೊಳ್ಳಲು ಖುರ್ಚಿ ಹಾಗೂ ವೇದಿಕೆಯ ಮುಂಭಾಗ 4 ಸಾವಿರ ಜನರಿಗೆ ಭಾರತೀಯ ಆಸನ ಸೇರಿದಂತೆ ಒಟ್ಟೂ 10 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಹೊರಗಡೆ ನಿಂತುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಸಮಾವೇಶಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಶಿರಸಿ ಜೀವಜಲ ಕಾರ್ಯಪಡೆಯು ಮಾಡಿದೆ. ಅಲ್ಲದೇ ಅಲ್ಪ ಉಪಹಾರವನ್ನು ನೀಡಲಾಗುತ್ತಿದೆ. ದೂರದೂರುಗಳಿಂದ ಬರುವವರಿಗೆ ವಾಹನ ನಿಲುಗಡೆಗೆ ಜಾಗವನ್ನು ಅಂತಿಮಗೊಳಿಸಲಾಗಿದೆ.ವಾಹನ ನಿಲುಗಡೆ ಮಾಹಿತಿ:ದ್ವಿಚಕ್ರ ವಾಹನಗಳು ಕ್ರೀಡಾಂಗಣ ರಸ್ತೆ, ಕ್ರೀಡಾಂಗಣದ ಪಾರ್ಕಿಂಗ್‌ ಸ್ಥಳದಲ್ಲಿ, ಬಸ್‌ಗಳು ಎಂಇಎಸ್‌ ಹೈಸ್ಕೂಲ್‌ ಮೈದಾನ, ಕಾರುಗಳು ಕಾಲೇಜು ರಸ್ತೆ, ಸ್ಟೇಡಿಯಂ ಸುತ್ತ, ಕೆಎಚ್‌ಬಿ ಕಾಲೋನಿಯ ಮೈದಾನ, ಎಂಇಎಸ್‌ ಚೈತನ್ಯ ಕಾಲೇಜಿನ ಮೈದಾನ, ಹುಬ್ಬಳ್ಳಿ ರಸ್ತೆಯ ಟ್ರೈನಿಂಗ್‌ ಸೆಂಟರ್‌ ಮೈದಾನದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಯಂ ಸೇವಕರು:ಸಮಾವೇಶವನ್ನು ಯಶಸ್ವಿಗೊಳಿಸಲು ಮತ್ತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ದೃಷ್ಟಿಯಿಂದ 750 ಸ್ವಯಂ ಸೇವಕರನ್ನು ನೇಮಕಗೊಳಿಸಿ, ಪಾರ್ಕಿಂಗ್ ವಿಭಾಗ, ಸ್ವಾಗತ ವಿಭಾಗ, ರಕ್ಷಣೆ, ಊಟ, ಉಪಹಾರ ಸಮಿತಿ ರಚಿಸಿ, ಅವರಿಗೆ ವಿವಿಧ ಜವಾಬ್ದಾರಿಗಳು ನೀಡಲಾಗಿದೆ. ಅವರು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಒದಗಿಸಲಿದ್ದಾರೆ.ಸಭಾ ಕಾರ್ಯಕ್ರಮ:ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಜಡೆ ಮಹಾ ಸಂಸ್ಥಾನದ ಡಾ. ಮಹಾಂತ ಸ್ವಾಮೀಜಿ, ಸಿದ್ದಾಪುರ ಶಿರಳಗಿಯಬ್ರಹ್ಮಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯವಾದಿ ಎನ್‌.ಸಂತೋಷ ಹೆಗ್ಡೆ, ಪರಿಸರ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್‌.ವಿ. ದೇಶಪಾಂಡೆ, ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ, ಸತೀಶ ಸೈಲ್, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಹಳ್ಳಿ ಹಳ್ಳಿಯಲ್ಲಿಯೂ ಕಿಚ್ಚುತಲೆತಲಾಂತರದಿಂದ ಜಿಲ್ಲೆಯ ಜೀವ ನದಿಗಳಿಂದ ಕೃಷಿ ಚಟುವಟಿಕೆ ನಡೆಸುತ್ತ ಗ್ರಾಮೀಣ ಭಾಗದಲ್ಲಿ ಬದುಕು ಕಟ್ಟಿಕೊಂಡಿರುವ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಈಗಾಗಲೇ ಪ್ರತಿ ಮನೆ ಮನೆಗೂ ಸಮಾವೇಶಕ್ಕೆ ಪಾಲ್ಗೊಳ್ಳುವಂತೆ ಆಮಂತ್ರಣ ಪತ್ರವನ್ನು ನೀಡಿ, ಪ್ರತಿ ಮನೆಯಿಂದ ಕಡ್ಡಾಯವಾಗಿ ಒಬ್ಬರು ಭಾಗವಹಿಸುವಂತೆ ತಿಳಿಸಲಾಗಿದೆ. ಅಘನಾಶಿನಿ- ಬೇಡ್ತಿ, ವರದಾ ನದಿ ನಮ್ಮದು, ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂಬ ಘೋಷ ವಾಕ್ಯದಿಂದ ಮತ್ತು ಶರಾವತಿ ಪಂಪ್ಡ್‌ ಸ್ಟೋರೆಜ್‌ ಯೋಜನೆ ವಿರೋಧಿಸಿ ಕುಮಟಾ, ಹೊನ್ನಾವರ, ಭಟ್ಕಳ, ಸಾಗರ, ಶಿವಮೊಗ್ಗ, ಗೇರುಸೊಪ್ಪ ಭಾಗದಲ್ಲಿ ಈಗಾಗಲೇ ಕಿಚ್ಚು ಹಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಮಾವೇಶಕ್ಕೆ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ.

ಪೊಲೀಸ್‌ ಬಂದೋಸ್ತ್‌ಸಮಾವೇಶದಲ್ಲಿ ಅಹಿತಕರ ಘಟನೆಗಳು ಸಂಭವಿಸಬಾರದೆಂದು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡು ಬಂದೋಬಸ್ತ್‌ ಒದಗಿಸಿದ್ದು, ಕಾರವಾರದ ಶ್ವಾನದಳ, ಬಾಂಬ್‌ ನಿಷ್ಕ್ರೀಯ ದಳ ಆಗಮಿಸಿ, ವೇದಿಕೆ ಹಾಗೂ ಮೈದಾನದ ಸುತ್ತಮುತ್ತಲೂ ಪರಿಶೀಲನೆ ನಡೆಸಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಮೂವರು ವೃತ್ತ ನಿರೀಕ್ಷಕರು, 10 ಸಬ್‌ ಇನ್‌ಸ್ಪೆಕ್ಟರ್‌, 30 ಎಎಸ್‌ಐ, ಒಂದು ಕರ್ನಾಟಕ ಸಶಸ್ತ್ರ ಮೀಸಲು ಪಡೆ, 2 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ 200ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಭದ್ರತೆ ನಿರ್ವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ