ತರೀಕೆರೆನಾಡಿನ ಹೆಮ್ಮೆಯ ಸಾಹಿತಿ ಚಟ್ನಳ್ಳಿ ಮಹೇಶ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಇಡೀ ಚಿಕ್ಕಮಗಳೂರು ಜಿಲ್ಲೆಗೆ ದೊರೆತ ಗೌರವ ಎಂದು ಲೋಕಸಭಾ ಮಾಜಿ ಸದಸ್ಯ ಬಿ.ಎನ್. ಚಂದ್ರಪ್ಪ ಹೇಳಿದರು.
ಚಟ್ನಳ್ಳಿ ಮಹೇಶ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆನಾಡಿನ ಹೆಮ್ಮೆಯ ಸಾಹಿತಿ ಚಟ್ನಳ್ಳಿ ಮಹೇಶ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಇಡೀ ಚಿಕ್ಕಮಗಳೂರು ಜಿಲ್ಲೆಗೆ ದೊರೆತ ಗೌರವ ಎಂದು ಲೋಕಸಭಾ ಮಾಜಿ ಸದಸ್ಯ ಬಿ.ಎನ್. ಚಂದ್ರಪ್ಪ ಹೇಳಿದರು.ತರೀಕೆರೆ ಪಟ್ಟಣದ ತುಂಗಭದ್ರಾ ಕಾಲೇಜು ಸಭಾಂಗಣದಲ್ಲಿ ಚಟ್ನಳ್ಳಿ ಮಹೇಶ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು. ಕಳೆದ ಮೂರು ದಶಕಗಳಿಂದ ಚಟ್ನಳ್ಳಿ ಮಹೇಶ್ ಅವರ ವಾಗ್ಜರಿ ಆಲಿಸುತ್ತ ಬಂದಿದ್ದೇನೆ. ಅವರು ತಮ್ಮ ಭಾಷಣಗಳಲ್ಲಿ ಉಣಬಡಿಸುವ ಶರಣರ ವಚನಗಳು, ದಾಸರ ಕೀರ್ತನೆ ಗಳು, ಕವಿವಾಣಿಗಳು ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆ ನನ್ನಂತಹ ಸಹಸ್ರಾರು ಜನರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಿವೆ. ಅವರ 20 ನಿಮಿಷಗಳ ಭಾಷಣ ಆಲಿಸಿದರೆ 20 ಪುಸ್ತಕಗಳನ್ನು ಓದಿದಷ್ಟು ಅಪಾರ ಜ್ಞಾನ ಲಭಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಭಿನಂದನೆಗೆ ಪ್ರತಿಕ್ರಿಯಿಸಿದ ಚಟ್ನಳ್ಳಿ ಮಹೇಶ್, ಗುರುಹಿರಿಯರ ಕೃಪೆ, ಸಾಹಿತ್ಯಾಸಕ್ತರ ಪ್ರೀತಿ ಹಾಗೂ ಸಂಘ-ಸಂಸ್ಥೆಗಳ ಸಹಕಾರ ತಮ್ಮ ಸಾಹಿತ್ಯ ಪಯಣಕ್ಕೆ ಅಪಾರ ಶಕ್ತಿ ತುಂಬಿದೆ. ಸಮಾನ ಮನಸ್ಕ ಸಂಸ್ಕೃತಿ ಚಿಂತಕರ ಸಾಂಘಿಕ ಪ್ರಯತ್ನದ ಮೂಲಕ ನಾಡು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದರು.ಬದುಕು ಮತ್ತು ಸಮುದಾಯದ ನಡುವೆ ಸೇತುವೆಯಾಗಿ ನಿಲ್ಲುವ ಸಾಹಿತ್ಯಕ್ಕೆ ಜನಹಿತದ ಕಾಳಜಿ ಇರಬೇಕು. ಕನ್ನಡದ ಕಾಯಕ ಕೇವಲ ಕೂಲಿ ಕೆಲಸವಾಗದೆ ಕರುಳಿನ ಸೇವೆಯಾಗಬೇಕು. ಆಧುನಿಕತೆ ಒತ್ತಡಗಳನ್ನು ಜೀರ್ಣಿಸಿಕೊಂಡು ಕಾಲದ ಪರೀಕ್ಷೆಯಲ್ಲಿ ಗೆದ್ದು ಉಳಿದು ಬೆಳೆಯುವ ಅಂತಃಶಕ್ತಿ ಕನ್ನಡ ಭಾಷೆಗಿದೆ ಎಂದು ವಿವಿಧ ನಿದರ್ಶನಗಳ ಮೂಲಕ ವಿವರಿಸಿದರು.ಈ ಸಂದರ್ಭದಲ್ಲಿ ಸಾಹಿತಿ ಡಾ. ಮರಳು ಸಿದ್ದಯ್ಯ ಪಟೇಲ್ ಚಟ್ನಳ್ಳಿ ಮಹೇಶ್ ಅವರಿಗೆ ''''''''ಕರುನಾಡ ಶ್ರೀ'''''''' ಮತ್ತು ''''''''ಚಂದ್ರಶ್ರೀ'''''''' ಪ್ರಶಸ್ತಿ ನೀಡಿ ಗೌರವಿಸಿದರು. ತರೀಕೆರೆ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಅಭಿನಂದನಾ ನುಡಿಗಳನ್ನಾಡಿದರು.ಕನ್ನಡ ಶ್ರೀ ಭಗವಾನ್ ದತ್ತಿ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ನವೀನ್ ಪೆನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಂಗಭದ್ರಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂದೀಪ್ ಎಲ್., ತುಂಗಭದ್ರಾ ಪಿಯು ಕಾಲೇಜಿನ ಪ್ರಾಂಶುಪಾಲೆ ಬಿಂದು ಯತೀಶ್, ಬೆಂಗಳೂರಿನ ಹೈಕೋರ್ಟ್ ವಕೀಲ ಬಿ.ಸಿ. ಉತ್ಸವ, ಸಂಸ್ಕೃತಿ ಚಿಂತಕರಾದ ಶಿವಣ್ಣ, ಮನಸುಳಿ ಮೋಹನ್, ಸದ್ವಿದ್ಯಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಹರ್ಷಿಣಿ, ಗಾಯತ್ರಿ ರವಿ, ಉಮಾ ಪ್ರಕಾಶ್, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.