ಕನ್ನಡಪ್ರಭ ವಾರ್ತೆ ಕೋಲಾರ
ಅಮೂಲ್ಯವಾದ ವಿದ್ಯಾರ್ಥಿ ಜೀವನದಿಂದಲೇ ಕಾನೂನು ಪಾಲಿಸಿ ಅಪರಾಧ ಮುಕ್ತ ಜೀವನ ನಡೆಸುವುದನ್ನು ರೂಢಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮುನಿ ಕಿವಿಮಾತು ಹೇಳಿದರು.ನಗರದ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳೀಯ ಸಂಸ್ಥೆಯಿಂದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾನೂನು ಅರಿವು ಅಗತ್ಯವಿದ್ಯಾರ್ಥಿ ಜೀವನದಲ್ಲಿ ನೀವು ಯಶಸ್ಸು ಸಾಧಿಸಿದರೆ ನಿಮ್ಮ ಇಡೀ ಜೀವನ ಸುಂದರವಾಗಿರುತ್ತದೆ. ಆದರೆ ಇಲ್ಲಿ ನೀವು ತಪ್ಪು ಮಾಡಿ ದಾರಿ ತಪ್ಪಿದರೆ ನಿಮ್ಮ ಇಡೀ ಬದುಕು ಕಷ್ಟಕ್ಕೆ ಸಿಲುಕುತ್ತದೆ. ಉತ್ತಮ ಜೀವನಕ್ಕೆ ಕಾನೂನು ಅರಿವು ಆತ್ಮಸ್ಥೈರ್ಯ ತುಂಬುತ್ತದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಗುರಿ ಓದಿನ ಕಡೆ ಇರಲಿ, ಸಂಸ್ಕಾರ, ವಿನಯ, ಶಿಸ್ತು ನಿಮ್ಮೊಂದಿಗೆ ಇದ್ದರೆ ಕಲಿಕಾಸಕ್ತಿ ತಾನಾಗಿಯೇ ಮೂಡುತ್ತದೆ, ದುಶ್ಚಟಗಳಿಂದ ದೂರವಿರುವಂತೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.ಅಪರಾಧ ಮುಕ್ತ ಸಮಾಜ ನಿರ್ಮಿಸಿ
ಇತ್ತೀಚಿನ ದಿನಗಳಲ್ಲಿ ಮಾದಕ, ತಂಬಾಕು ವ್ಯಸನ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ, ಇದರ ಸುಳಿಗೆ ನೀವು ಸಿಲುಕದಿರಿ, ಯಾರೇ ಆಗಲಿ ಮಾದಕ ವಸ್ತು ಮಾರುತ್ತಿದ್ದರೆ, ಸೇವಿಸುತ್ತಿದ್ದರೆ ಕೂಡಲೇ ಮಕ್ಕಳ ಸಹಾಯವಾಣಿಗೆ ದೂರು ನೀಡಿ ಆರೋಗ್ಯಕರ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಕಿವಿಮಾತು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಸ್ಕೌಟ್ಸ್ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್, ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಸಹಾಯಕ ಆಯುಕ್ತ ವಿಠಲ್ ರಾವ್, ಸ್ಥಾನಿಕ ಆಯುಕ್ತ ಕೃಷ್ಣಮೂರ್ತಿ, ರಶ್ಮೀ, ವೆಂಕಟರಂಗಂ, ಶ್ರೀದೇವಿ, ಮನು ಇದ್ದರು.