ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮುಖ್ಯ

KannadaprabhaNewsNetwork |  
Published : Apr 04, 2026, 02:00 AM IST
ಸನ್ಮಾರ್ಗ ಗೆಳೆಯರ ಬಳಗದಿಂದ ಬಳ್ಳಾರಿಯಲ್ಲಿ ಗುರುವಾರ ಆರಂಭಗೊಂಡ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರಕ್ಕೆ ಉಪ ವಿಭಾಗಾಧಿಕಾರಿ ರಾಜೇಶ್ ಎಚ್.ಡಿ.ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಮುಖವೊಡತ್ತಿದ್ದಾರೆ.

ಬಳ್ಳಾರಿ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಅತ್ಯಂತ ಮುಖ್ಯ ಎಂದು ಬಳ್ಳಾರಿಯ ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ. ಅಭಿಪ್ರಾಯಪಟ್ಟರು.

ಇಲ್ಲಿನ ಮೋಕಾ ರಸ್ತೆಯ ಸನ್ಮಾರ್ಗ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಮುಖವೊಡತ್ತಿದ್ದಾರೆ. ಹೀಗಾಗಿ ಸಹಜವಾಗಿ ಸ್ಪರ್ಧೆಯ ಪೈಪೋಟಿ ಇದ್ದೇ ಇರುತ್ತದೆ. ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕೇವಲ ಜ್ಞಾನ ಮತ್ತು ಓದು ಮಾತ್ರವಲ್ಲದೆ, ಆತ್ಮವಿಶ್ವಾಸವೂ ಸಮಾನವಾಗಿ ಅಗತ್ಯವಾಗಿದೆ. ಪರೀಕ್ಷಾ ಸಮಯದಲ್ಲಿ ಒತ್ತಡವನ್ನು ನಿಯಂತ್ರಿಸುವುದು, ಸಮಯವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಮತ್ತು ಸಕಾರಾತ್ಮಕ ಮನೋಭಾವವನ್ನು ಉಳಿಸಿಕೊಳ್ಳುವುದು ಯಶಸ್ಸಿನ ಪ್ರಮುಖ ಸೂತ್ರಗಳಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ವಿದ್ಯಾರ್ಥಿಗಳು ಆರಂಭದಲ್ಲಿ ಉತ್ಸಾಹದಿಂದ ಓದನ್ನು ಆರಂಭಿಸಿದರೂ, ಕಾಲಕ್ರಮೇಣ ಆ ಉತ್ಸಾಹ ಕುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಅವರ ಸಾಧನೆ ಮೇಲೆ ನೇರ ಪರಿಣಾಮ ಬೀಳುತ್ತದೆ. ಆದ್ದರಿಂದ, ಆರಂಭದ ಉತ್ಸಾಹವನ್ನು ಅಂತ್ಯದವರೆಗೆ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಇತರರೊಂದಿಗೆ ಹೋಲಿಕೆ ಮಾಡುವುದಕ್ಕಿಂತ, ನಿಮ್ಮ ಜೊತೆ ನೀವೇ ಸ್ಪರ್ಧೆಗಿಳಿಯುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ನಿನ್ನೆಗಿಂತ ಇಂದು ಉತ್ತಮವಾಗಿ ಓದುವುದು, ಹಿಂದಿನ ಪರೀಕ್ಷೆಗಳಿಗಿಂತ ಹೆಚ್ಚು ಅಂಕ ಗಳಿಸುವುದು ಇಂತಹ ಸಣ್ಣ ಗುರಿಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಸನ್ಮಾರ್ಗ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್, ಸನ್ಮಾರ್ಗ ಗೆಳೆಯರ ಈವರೆಗೆ ಹಮ್ಮಿಕೊಂಡು ಬಂದಿರುವ ವಿವಿಧ ಸೇವಾ ಕಾರ್ಯಗಳನ್ನು ತಿಳಿಸಿದರಲ್ಲದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ತೋರಣಗಲ್ ಡಿವೈಎಸ್ಪಿ ಪ್ರಸಾದ ಗೋಖಲೆ, ಬಳ್ಳಾರಿ ನಗರ ಡಿವೈಎಸ್ಪಿ ಗೋವಿಂದರಾಜು ಅವರು ಮಾತನಾಡಿದರು.

ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷ ಎನ್.ಹನುಮಂತ ರೆಡ್ಡಿ, ಎಂಎಸ್‌ಜಿ ಜಗದೀಶ್, ಕಾರ್ಯಾಗಾರದ ತರಬೇತುದಾರರಾದ ಪುರುಷೋತ್ತಮ, ಬಿ.ಚಂದ್ರಶೇಖರ್, ದುರ್ಗೇಶ್, ಶಶಿಕುಮಾರ್, ಪಿ.ಹರಿಪ್ರಸಾದ್ ಮತ್ತಿತರರಿದ್ದರು. ಬಳಿಕ ಕುರುಗೋಡು ಪಿಎಸ್‌ಐ ಸುಪ್ರೀತ್ ಅವರು ಪೊಲೀಸ್ ಪರೀಕ್ಷೆಯ ಸಿದ್ಧತೆ ಕುರಿತು ತಿಳಿಸಿಕೊಟ್ಟರು. ಶಿಕ್ಷಕ ಸತ್ಯನಾರಾಯಣ ಹಾಗೂ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್‌ 6ರಂದು ಹಾವೇರಿ ವಿವಿ ಘಟಿಕೋತ್ಸವ, 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ
ಬಳ್ಳಾರಿ ಮಹಾನಗರ ಪಾಲಿಕೆ ಸಹಾಯಕ ಎಂಜಿನಿಯರ್‌ ಮೇಲೆ ಪಾಲಿಕೆ ಸದಸ್ಯನ ಹಲ್ಲೆ