ಕನ್ನಡಪ್ರಭ ವಾರ್ತೆ ಸಾಗರ ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲು ಬಯಸಿದ್ದು, ಪಕ್ಷದ ವರಿಷ್ಠರಿಗೆ ಟಿಕೆಟ್ ಬೇಡಿಕೆ ಇರಿಸಿದ್ದೇನೆ ಆಯನೂರು ಮಂಜುನಾಥ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನನಗೆ ಅವಕಾಶ ಕೊಡುತ್ತದೆ ಎನ್ನುವ ವಿಶ್ವಾಸವಿದ್ದು, ಎಲ್ಲೆಡೆ ಪ್ರವಾಸ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದೇನೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಮತ ನೀಡಿದ ಮತದಾರರಿಗೆ ವಂಚನೆಯಾಗದಂತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಮತ್ತು ಬೇಡಿಕೆಗಳನ್ನು ಈಡೇರಿಸಲು ಅವರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರಿಂದ ದುಡಿಯುವ ವರ್ಗಕ್ಕೆ ಅನ್ಯಾಯವಾಗಿದೆ. ಈ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದ್ದು, ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಲಕ್ಷಾಂತರ ಪದವೀಧರರು ತಮ್ಮ ಪದವಿ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಸೌಲಭ್ಯ ಪಡೆದಿದ್ದಾರೆ. ಪದವಿ ಮುಗಿದಿದ್ದರೂ ಈತನಕ ಉದ್ಯೋಗ ಸಿಗದೇ ಅವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೇ ಬ್ಯಾಂಕ್ ಸಾಲ ಮರುಪಾವತಿಗೆ ಒತ್ತಾಯ ದುರದೃಷ್ಟಕರ ಸಂಗತಿ. ಈ ಹಿನ್ನೆಲೆ ಒಂದೋ ಸಾಲಮನ್ನಾ ಮಾಡಿ, ಇಲ್ಲವೇ ಸಾಲದ ಮೇಲಿನ ಬಡ್ಡಿಮನ್ನಾ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.ಹಿಂದಿನಿಂದಲೂ ನಾನು ಪದವೀಧರರು, ಶಿಕ್ಷಕರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಿರುದ್ಯೋಗಿಗಳು, ಉದ್ಯೋಗಿಗಳು, ಪದವೀಧರರು, ಸರ್ಕಾರಿ ಅರೆಸರ್ಕಾರಿ ಉದ್ಯೋಗಿಗಳ ದೊಡ್ಡ ಸಮೂಹ ನನ್ನನ್ನು ಬೆಂಬಲಿಸುತ್ತದೆ ಎನ್ನುವ ವಿಶ್ವಾಸವಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿ, ಗೆಲ್ಲುತ್ತದೆ ಎಂದು ಹೇಳಿದರು.
ಬಿ.ಆರ್. ಜಯಂತ್, ಮಲ್ಲಿಕಾರ್ಜುನ ಹಕ್ರೆ, ಐ.ಎನ್. ಸುರೇಶಬಾಬು, ಮಂಡಗಳಲೆ ಗಣಪತಿ, ಚೇತನರಾಜ್ ಕಣ್ಣೂರು, ವೈ.ಎಚ್. ನಾಗರಾಜ್, ದಿನೇಶ್ ಡಿ., ಗಿರೀಶ್ ಕೋವಿ, ಸೂರ್ಯನಾರಾಯಣ ಖಂಡಿಕಾ, ತಾರಾಮೂರ್ತಿ, ಮಹಾಬಲ ಕೌತಿ, ಸುರೇಶ ಹಾಜರಿದ್ದರು.- - - -(ಫೋಟೋ: ಆಯನೂರು ಮಂಜುನಾಥ್)