ಮಠಾಧೀಶರ ನಡೆಯಿಂದ ಸಮಾಜ ಅಧಃಪತನದತ್ತ: ಡಾ. ಗೊ.ರು. ಚೆನ್ನಬಸಪ್ಪ

KannadaprabhaNewsNetwork |  
Published : Feb 07, 2024, 01:49 AM ISTUpdated : Feb 07, 2024, 01:50 AM IST
6ಡಿಡಬ್ಲೂಡಿ2ಲಂಡನ್ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಕಲ್ಯಾಣ ನಗರದ ಸಿದ್ದರಾಮೇಶ್ವರ ಮಾರ್ಗದರ್ಶಿಯಲ್ಲಿ ಮಂಗಳವಾರ ರು.25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡ ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಯನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಮಂಗಳವಾರ ಕಲ್ಯಾಣ ನಗರದ ಸಿದ್ದರಾಮೇಶ್ವರ ಮಾರ್ಗದರ್ಶಿಯ ಮಜ್ಜಿಗೆ ಪಂಚಪ್ಪ ಭವನದಲ್ಲಿ ಡಾ. ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಯನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಪ್ರದಾನ ಮಾಡಲಾಯಿತು.

ಧಾರವಾಡ: ನಾಡಿನ ಮಠಾಧೀಶರು ಧರ್ಮ ಹಾಗೂ ಸಮಾಜದ ಜಾಗೃತಿ ಬಿಟ್ಟು ರಾಜಕಾರಣ, ತಮ್ಮ ತಮ್ಮ ಜಾತಿಗಳ ಬೆನ್ನು ಬಿದ್ದಿರುವ ಹಿನ್ನೆಲೆಯಲ್ಲಿ ಸಮಾಜ ಅಧಃಪತನದ ಹಾದಿ ಹಿಡಿದಿದೆ ಎಂದು ಚಿಂತಕ ಡಾ. ಗೊ.ರು. ಚೆನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ಲಂಡನ್ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಕಲ್ಯಾಣ ನಗರದ ಸಿದ್ದರಾಮೇಶ್ವರ ಮಾರ್ಗದರ್ಶಿಯ ಮಜ್ಜಿಗೆ ಪಂಚಪ್ಪ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡ ಡಾ. ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಯನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಪ್ರದಾನ ಮಾಡಿದ ಅವರು, ಮಠಾಧೀಶರು ಧರ್ಮ ಜಾಗೃತಿ, ಶಿಕ್ಷಣ, ಸಮಾಜದ ಕಡೆಗೆ ಹೆಚ್ಚು ಒಲವು ತೋರುವ ಕಾರ್ಯ ಮಾಡಲಿ ಎಂದರು.

ಭಾವನೆಗಳ ರಾಷ್ಟ್ರ ಭಾರತದಲ್ಲಿ ಸಂಶೋಧಕರು ಶಿಲುಬೆಗೆ ಏರುವ ಸಂದಿಗ್ಧತೆ ಬಂದಿದೆ. ಬೆಂಕಿಗಿಂತ ಬೆಳಕು ದೊಡ್ಡದು ಎಂದು ನಂಬಿದ ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಕೊಲೆಯೇ ಇದಕ್ಕೆ ಸಾಕ್ಷಿ. ಡಾ. ಕಲಬುರ್ಗಿ ಅವರದು ಸಂಶೋಧನೆಯೇ ಕಾಯಕ. ಜನರ ಕಷ್ಟ-ಸಂತಸಗಳಿಗೆ ಅವರು ನೇರವಾಗಿ ಸ್ಪಂದಿಸಿದವರು. ಜನರಲ್ಲಿಯೇ ಜಂಗಮ ಕಂಡು, ಮಾನವ ಸಮಾಜವನ್ನು ಚಿಕಿತ್ಸಕ ಬುದ್ಧಿಯಿಂದ ನೋಡುವ ಏಕೈಕ ದಾರ್ಶನಿಕ ಅವರಾಗಿದ್ದರು ಎಂದರು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಸಮಾಜ ಸುಧಾರಣೆ, ಶರಣರ ಸಂದೇಶಗಳು, ತತ್ವ ಪ್ರಸಾರ ಕೈಂಕರ್ಯಗಳಿಂದ ಉಳಿದ ಮಠಾಧೀಶರಿಗಿಂತ ಭಿನ್ನವಾಗಿದ್ದಾರೆ. ಇಂತಹವರಿಗೆ ಡಾ. ಕಲಬುರ್ಗಿ ಪ್ರಶಸ್ತಿ ನೀಡಿರುವುದು ಸ್ತುತ್ಯಾರ್ಹ ಎಂದರು.

ಪ್ರಶಸ್ತಿ ಸ್ವೀಕರಿಸಿದ ಸಾಣೇಹಳ್ಳಿ ಪಂಡಿತಾರಾಧ್ಯರು, 12ನೇ ಶತಮಾನದಿಂದ 21ನೇ ಶತಮಾನದವರೆಗೂ ಸನಾತನವಾದಿಗಳು ಪುರಾತನವಾದಿಗಳಿಗೆ ಕಿರುಕುಳ ನೀಡುತ್ತಲೇ ಬಂದಿರುವುದು ವಿಷಾದದ ಸಂಗತಿ. ಇಂದು ನುಡಿ ಸಿದ್ಧಾಂತ ಇದೆ. ನಡೆ ಸಿದ್ಧಾಂತ ಕ್ಷೀಣಿಸಿದೆ. ಭಕ್ತರನ್ನು ಜಾಗೃತಿ ಮಾಡುವವನೇ ನೈಜ ಗುರು. ಡಾ.ಕಲಬುರ್ಗಿ ಅಪರೂಪದ ವ್ಯಕ್ತಿ. ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ, ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ ಎಂದರು.

ಡಾ. ಎಂ.ಎಂ. ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ಡಾ. ಕಲಬುರ್ಗಿ ನಿರಂತರ ಓದು, ಬೋಧನೆ, ಶಿಸ್ತಿನ ಸಂಶೋಧನೆ, ಯೋಜನೆ, ಬರಹ ಹಾಗೂ ಭಾಷಣ ಹೀಗೆ ಪಂಚಮುಖಿ ಪರಮೇಶ್ವರರಾಗಿದ್ದರು. ಕನ್ನಡದ ಉಳಿವು ಡಾ. ಕಲಬುರ್ಗಿ ಅವರ ಧ್ಯೇಯ. ಧರ್ಮ, ಸಾಹಿತ್ಯ ಶುದ್ಧೀಕರಣ, ಮಾನವರ ಏಕೀಕರಣ, ಕಾಲಕ್ಕೆತಕ್ಕ ನವೀಕರಣ, ಜಾಗತೀಕರಣ, ಸಬಲೀಕರಣ ಹೀಗೆ ಶರಣ ಸಮಾಜದ ಪಂಚಸೂತ್ರಗಳನ್ನು ಅವರು ಹಾಕಿಕೊಟ್ಟಿದ್ದಾಗಿ ತಿಳಿಸಿದರು.

ಗದಗ ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಣ ಎಸ್. ಮಹಾದೇವಯ್ಯ, ಉಪಾಧ್ಯಕ್ಷ ಬಿ.ಎಲ್. ಪಾಟೀಲ, ಕಾರ್ಯದರ್ಶಿ ಕೆ.ವಿ. ನಾಗರಾಜಮೂರ್ತಿ, ಪ್ರಾಚಾರ್ಯ ಶಶಿಧರ ತೋಡ್ಕರ್ ಸೇರಿ ಡಾ.ಎಂ.ಎಂ.ಕಲಬುರ್ಗಿ ಶಿಷ್ಯರು, ಅಭಿಮಾನಿಗಳು ಭಾಗವಹಿಸಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ