ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕುಟುಂಬದಲ್ಲಾಗುವ ತಂದೆ ತಾಯಿ ನಡುವಿನ ಜಗಳ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿ ಅವರ ಸುಗಮ ಜೀವನಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ಏರ್ಪಡಿಸಿದ್ಧ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಂದು ಮಗುವು ದೇಶದ ಭವಿಷ್ಯ. ಅವರನ್ನು ಸ್ವಾಸ್ಥ್ಯ ಪರಿಸರದಲ್ಲಿ ಬೆಳೆಸಿ ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ಪೌಷ್ಠಿಕ ಆಹಾರ ಹಾಗೂ ಅವರ ಅಗತ್ಯತೆಗಳಿಗೆ ಕೊರತೆಯಾಗದಂತೆ ನಿಗಾವಹಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.ಮಕ್ಕಳ ಮುಂದೆ ಪೋಷಕರು ಹಾಗೂ ಇತರೆ ವ್ಯಕ್ತಿ ಅಸಭ್ಯವಾಗಿ ವರ್ತಿಸದಂತೆ ಎಚ್ಚರ ವಹಿಸಬೇಕು. ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ರೀತಿ ದೌರ್ಜನ್ಯಗಳು ಜರುಗದಂತೆ ಪ್ರತಿ ಕುಟುಂಬಗಳಿಗೆ ಮಾಹಿತಿ ತಲುಪಿಸಬೇಕು ಎಂದ ಅವರು, ಮಕ್ಕಳ ರಕ್ಷಣೆಗೆ ಇರುವ ಕಾನೂನು ಕ್ರಮಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಮಹಿಳೆಯರನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಮಹಿಳಾ ಸಹಾಯವಾಣಿ- 181 ಅನ್ನು ಬಳಸಿಕೊಳ್ಳುವಂತೆ ಹಾಗೂ ಪರಿಹಾರ, ಜೀವನಾಂಶ ಪಡೆದುಕೊಳ್ಳಬಹುದಾದ ರೀತಿ ಹಾಗೂ ರಕ್ಷಣೆಗೆ ಇರುವ ಕಾಯ್ದೆ ಕಾನೂನುಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ, ಮಹಿಳೆಯರ ಮೇಲೆ ಆಗುತ್ತಿರುವ ಕೌಟುಂಬಿಕ ದೌರ್ಜನ್ಯದಿಂದ ಸಮಾಜಕ್ಕೆ ದುಷ್ಪರಿಣಾಮ ಬೀರುತ್ತವೆ. ವರದಕ್ಷಿಣೆ ಕಿರುಕುಳ ತಡೆಯುವುದು ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆ ಯರ ಮೇಲೆ ನಡೆಯುವಂತಹ ಲೈಂಗಿಕ ದೌರ್ಜನ್ಯ ತಡೆಗಟ್ಟುವುದಕ್ಕಾಗಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10ಕ್ಕಿಂತ ಹೆಚ್ಚಿನ ಸಿಬ್ಬಂದಿ ಇದ್ದಲ್ಲಿ ಆಂತರಿಕ ದೂರು ನಿರ್ವಹಣಾ ಸಮಿತಿ ಕಡ್ಡಾಯವಾಗಿ ರಚಿಸುವಂತೆ ತಿಳಿಸಿದರು.ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಪವಿತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಿ. ಸಂತೋಷ್, ಚಿಕ್ಕಮಗಳೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್, ವಕೀಲರಾದ ಮಮತ ಮತ್ತು ಅರುಂಧತಿ ಉಪಸ್ಥಿತರಿದ್ದರು.25 ಕೆಸಿಕೆಎಂ 1ಚಿಕ್ಕಮಗಳೂರು ತಾಪಂ ಸಭಾಂಗಣದಲ್ಲಿ ನಡೆದ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ಏರ್ಪಡಿಸಿದ್ಧ ಕಾರ್ಯಾಗಾರದಲ್ಲಿ ಜಿಪಂ ಸಿಇಒ ಕೀರ್ತನಾ ಮಾತನಾಡಿದರು. ಮಹಾಂತೇಶ್ ಭಜಂತ್ರಿ, ನ್ಯಾ. ವಿ. ಹನುಮಂತಪ್ಪ ಇದ್ದರು.