ಪ್ರಧಾನಿ ಅಭ್ಯರ್ಥಿ ಕುರಿತು ಕಾಂಗ್ರೆಸ್‌ನಲ್ಲಿ ಗೊಂದಲ: ವಿ.ಸೋಮಣ್ಣ

KannadaprabhaNewsNetwork | Published : Apr 19, 2024 1:05 AM

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ತಿಳಿಸದೆ ಅವರು ಚುನಾವಣೆಯಲ್ಲಿ ಪಾಲ್ಗೊಳುತ್ತಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಲ್ಲಿಯೇ ಗೊಂದಲ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ತಿಳಿಸದೆ ಅವರು ಚುನಾವಣೆಯಲ್ಲಿ ಪಾಲ್ಗೊಳುತ್ತಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಲ್ಲಿಯೇ ಗೊಂದಲ ಉಂಟಾಗಿದೆ. ದೇಶದ ಅಭಿವೃದ್ಧಿ, ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿ ಮಾಡೋಣ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಹೇಳಿದರು. ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರಿಗೆ ಎರಡು ಸಾವಿರ ಕೊಟ್ಟಿದ್ದನ್ನೇ ನಾನು ಕೊಟ್ಟೆ ಎಂದು ಪದೇ ಪದೆ ಹೇಳುತ್ತಿದ್ದಾರೆ. ಅವರು ಗಂಡಸರಿಂದ ಕಿತ್ತು ಹೆಂಗಸರಿಗೆ ಕೊಟ್ಟಿದ್ದಾರಷ್ಟೇ. ಸಿದ್ದರಾಮಯ್ಯ ಸರ್ಕಾರ ಬಂದಾಗಲೆಲ್ಲ ರಾಜ್ಯಕ್ಕೆ ಬರಗಾಲ ಬರುತ್ತಿದ್ದು, ಇಂತಹ ಪಕ್ಷ ಮತ್ತೆ ಬೇಕೆ ನೀವೇ ಯೋಚನೆ ಮಾಡಿ.

2024ರ ಲೋಕಸಭಾ ಚುನಾವಣೆ ಚೀನಾ, ಪಾಕಿಸ್ತಾನ ಮತ್ತಿತರ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಇದು ಭಾರತದ ಭವಿಷ್ಯದ ಚುನಾವಣೆಯಾಗಿದೆ. ಹತ್ತು ವರ್ಷಗಳಲ್ಲಿ ಜನರ ಮನಗೆದ್ದು ವಿಶ್ವನಾಯಕನಾಗಿ ದೇಶದ ರಕ್ಷಣೆ, ಸಾರ್ವಭೌಮತೆ ಯನ್ನು ಎತ್ತಿಹಿಡಿದ ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಇಡಿ ದೇಶವೇ ಮೆಚ್ಚಿಕೊಂಡಿದೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಯಾವತ್ತೂ ಬಿಜೆಪಿಯವರೊಂದಿಗೆ ಹೋದವರಲ್ಲ. ತಮ್ಮ 92 ವಯಸ್ಸಿನಲ್ಲಿ ದೇಶಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಚುನಾವಣಾ ಅಖಾಡಕ್ಕಿಳಿದಿ ದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಈ ಭಾಗದಲ್ಲಿ ನೀರಾವರಿ ಸಮಸ್ಯೆ ಹೆಚ್ಚಿದ್ದು, ಕೆರೆಗಳು ನೀರಿಲ್ಲದೆ ಒಣಗುತ್ತಿವೆ. ಮಳೆ ಬೆಳೆಯಿಲ್ಲದೆ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ತುಮಕೂರು ಜಿಲ್ಲೆ ಬೆಂಗಳೂರಿನಂತೆ ಬೆಳೆಯಬೇಕು. ಶಾಶ್ವತ ನೀರಾವರಿ ಯೋಜನೆಗಳನ್ನು ತರ ಬೇಕಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ದಿಗೊಳಿಸು ತ್ತೇನೆ. ಸೋಮಣ್ಣ ಒಬ್ಬ ಸಮಾಜಕ್ಕೆ ಸೀಮಿತವಾಗಿಲ್ಲ. ಆಸರೆಯಿಲ್ಲದ ಸಮಾಜಕ್ಕೆ ಬಸವಣ್ಣನವರ ಅನುಯಾಯಿಯಂತೆ ನಿಲ್ಲುತ್ತೇನೆ ಎಂದು ಹೇಳಿದರು.

ಈ ಕ್ಷೇತ್ರಕ್ಕಾಗಿ ಸಾಕಷ್ಟು ಯೋಜನೆ ತರಬೇಕೆಂದುಕೊಂಡಿದ್ದೇನೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಡಯಾಗ್ನಟಿಕ್ ಸೆಂಟರ್, ವಿಶ್ವವಿದ್ಯಾಲಯ ತರುವ ಬಯಕೆಯಿದೆ. ಈಗಾಗಲೇ ತುಮಕೂರಿನಲ್ಲಿ ಮನೆ ಮಾಡಿದ್ದು, ತಿಪಟೂರಿನಲ್ಲಿಯೂ ಸಾರ್ವಜನಿಕ ಸಂಪರ್ಕಕ್ಕಾಗಿ ಶೀಘ್ರದಲ್ಲೇ ಕಚೇರಿ ಪ್ರಾರಂಬಿಸುತ್ತೇನೆ. ಹಗಲು ರಾತ್ರಿ ಎನ್ನದೆ ಒಬ್ಬ ಲೋಕಸಭಾ ಸದಸ್ಯ ಯಾವ ಮಟ್ಟಕ್ಕೆ ಕೆಲಸ ಮಾಡುತ್ತೇನೆಂದು ತೋರಿಸುತ್ತೇನೆ ಎಂದರು.

ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಗೆಲುವು ಖಚಿತವಾಗಿದ್ದು, ಜೆಡಿಎಸ್ ಮೈತ್ರಿಯಿಂದ ಅವರಿಗೆ ಮತ್ತಷ್ಟು ಬಲ ಬಂದಿದೆ. ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ. ಗ್ಯಾರಂಟಿ ಯೋಜನೆಗಳು ಕೆಲಸ ಮಾಡೋಲ್ಲ. ಪ್ರಗತಿಶೀಲ ಭಾರತ ನಿರ್ಮಾಣಕ್ಕೆ ಮೋದಿ ಅವಶ್ಯವಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು. ಬಳುವನೇರಲು, ಹಾಲ್ಕುರಿಕೆ, ಸಾರ್ಥವಳ್ಳಿ, ಗೊರಗೊಂಡನಹಳ್ಳಿ, ಹಿಂಡಿಸ್ಕೆರೆ, ಅಣ್ಣಾಪುರ ಗೇಟ್‌ ಕಡೆಗಳಲ್ಲಿ ಪ್ರಚಾರ ನಡೆಯಿತು. ಮಾಜಿ ಸಚಿವ ಬಿ.ಸಿ. ನಾಗೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿದರು. ಮುಖಂಡರಾದ ದೇವರಾಜು, ಗಂಗರಾಜು, ಶ್ರೀಕಂಠಮೂರ್ತಿ, ಸುರೇಶ್, ಜೆಡಿಎಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.

Share this article