ರಾಣಿಬೆನ್ನೂರು: ಇತ್ತೀಚಿಗೆ ಸರ್ಕಾರ ವೃದ್ಧಾಪ್ಯ ವೇತನ ಪಡೆಯುವ ಫಲಾನುಭವಿಗಳಲ್ಲಿ ಅನರ್ಹರ ಹೆಸರು ತೆಗೆದು ಹಾಕುವ ಸಲುವಾಗಿ ಹೊಸ ನಿಯಮ ಜಾರಿಗೆ ತಂದಿದೆ. ಅದರ ಪ್ರಕಾರ ಕೆಲವೊಂದು ದಾಖಲಾತಿಗಳನ್ನು ನೀಡುವಂತೆ ಫಲಾನುಭವಿಗಳಿಗೆ ಸೂಚಿಸಿದೆ. ಆದರೆ ಇದರಿಂದಾಗಿ ಅರ್ಹ ವೃದ್ಧಾಪ್ಯ ವೇತನ ಪಡೆಯುವವರು ಕಚೇರಿ ಹಾಗೂ ಶಾಲೆಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ನಿಯಮದಡಿ ಶಾಲೆಯಲ್ಲಿ ನೋಂದಣಿಯಿರುವ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆದರೆ ಶಾಲೆಗೆ ಹೋಗದಿರುವ ವೃದ್ಧರಿಗೆ ಇದರಿಂದ ಸಾಕಷ್ಟು ತೊಂದರೆಯಾಗಿದ್ದು, ಅವರ ಬಳಿ ಯಾವುದೇ ಶಾಲಾ ದಾಖಲೆಗಳು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾಭ್ಯಾಸ ಮಾಡಿಲ್ಲ: ಇಂತಹ ಸಂದರ್ಭಗಳಲ್ಲಿ ಸಂಬಂಧಿತ ಸರ್ಕಾರಿ ಶಾಲೆಯಿಂದ ಈ ವ್ಯಕ್ತಿ ಇಲ್ಲಿ ವಿದ್ಯಾಭ್ಯಾಸ ಮಾಡಿಲ್ಲ ಎಂಬ ಪ್ರಮಾಣಪತ್ರವನ್ನು ನೀಡಿದಲ್ಲಿ ಅದರ ಆಧಾರದ ಮೇಲೆ ಜಿಲ್ಲಾಸ್ಪತ್ರೆಯಲ್ಲಿ ವಯಸ್ಸಿನ ದೃಢೀಕರಣ ಪತ್ರ ನೀಡುವ ವ್ಯವಸ್ಥೆ ಇದೆ. ಆದರೂ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಈ ಪ್ರಮಾಣಪತ್ರ ನೀಡುವಲ್ಲಿ ವೃದ್ಧರು ಹಾಗೂ ಹಿರಿಯ ಮಹಿಳೆಯರನ್ನು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದಾಖಲೆಗಳ ಕೊರತೆಯಿಂದಲೇ ಈಗಾಗಲೇ ಸಂಕಷ್ಟದಲ್ಲಿರುವ ಜನರಿಗೆ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯೇ ಮತ್ತಷ್ಟು ತೊಂದರೆ ಉಂಟುಮಾಡುತ್ತಿದೆ.ಇನ್ನು ಆ ವ್ಯಾಪ್ತಿಗೆ ಸಂಬಂಧಪಡುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹುಡುಗಾಟಕ್ಕೆ ಅರ್ಜಿ ಸಲ್ಲಿಸುವ ವೃದ್ಧರಿಗೆ ಅಲ್ಲಿಯ ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸತಾಯಿಸುತ್ತಿದ್ದು, ಇದರಿಂದ ವಯಸ್ಸಾದವರೂ ನಿತ್ಯ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಅದಕ್ಕೆ ಸಂಬಂಧಪಟ್ಟ ಶಿಕ್ಷಕರು ಹಾಗೂ ಸಿಬ್ಬಂದಿ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಏಕವಚನದಲ್ಲಿ ಮಾತನಾಡುವುದು, ಇನ್ನೂ ಯಾರಿಗೆ ಬೇಕಾದರೂ ಹೇಳು, ನಿನ್ನ ದಾಖಲಾತಿ ನೀಡುವುದಿಲ್ಲ ಎಂಬ ದರ್ಪದ ಮಾತುಗಳನ್ನು, ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ.
ಈ ಕುರಿತು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಶಿಕ್ಷಕರು ಅವರ ಮಾತಿಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ವಾರ ಬಾ ಹೋಗು ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಇಂತಹ ಇಳಿವಯಸ್ಸಿನಲ್ಲಿ ಕೂಡ ಕನಿಕರ ಇಲ್ಲವೆಂಬಂತೆ ಕಾಣುತ್ತಿದೆ.
ನಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗೆ ಶಾಲಾ ದೃಢೀಕರಣ ಪತ್ರ ಪಡೆಯಲು ಕಳೆದ ಹತ್ತು ದಿನಗಳಿಂದ ಅಲೆದಾಡುತ್ತಿರುವೆ. ಇದುವರೆಗೂ ಅದನ್ನು ನೀಡಲು ಅಲ್ಲಿನ ಶಿಕ್ಷಕರು ಎಸ್‌ಆರ್‌ಐ ನೆಪವೊಡ್ಡಿ ಸತಾಯಿಸುತ್ತಿದ್ದಾರೆ ಎಂದು ರಾಣಿಬೆನ್ನೂರಿನ ಬಂದಮ್ಮ ಹೇಳಿದರು.