ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂಗೆ ಗುದ್ದಾಟ: ಬಿ.ವೈ.ವಿಜಯೇಂದ್ರ

KannadaprabhaNewsNetwork | Updated : Jul 05 2024, 01:29 PM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅವರದೇ ಪಕ್ಷದ ಶಾಸಕರಿಗೆ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಹೀಗಾಗಿ ಪಕ್ಷದಲ್ಲಿ ಸಿಎಂ-ಡಿಸಿಎಂ ಬದಲಾವಣೆ ಕೂಗು ಎಬ್ಬಿದೆ. ಈ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

 ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳಿಗೆ ಹಾದಿ-ಬೀದಿಯಲ್ಲಿ ಗಲಾಟೆಗಳು ನಡೆಯುತ್ತಿವೆ. ಈ ಸರ್ಕಾರ ಎಷ್ಟು ದಿನ ಜೀವಂತವಾಗಿ ಇರುತ್ತೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅವರದೇ ಪಕ್ಷದ ಶಾಸಕರಿಗೆ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಹೀಗಾಗಿ ಪಕ್ಷದಲ್ಲಿ ಸಿಎಂ-ಡಿಸಿಎಂ ಬದಲಾವಣೆ ಕೂಗು ಎಬ್ಬಿದೆ. ಈ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 18-20 ಸ್ಥಾನ ಗೆಲ್ಲುವ ಭ್ರಮೆಯಲ್ಲಿತ್ತು. ಆದರೆ, ಬಿಜೆಪಿ-ಜೆಡಿಎಸ್‌ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ರಾಜ್ಯದ ಮತದಾರರು ಕಾಂಗ್ರೆಸ್‌ನ ಪೊಳ್ಳು ಭರವಸೆಗಳು, ಒಡೆದಾಳುವ ನೀತಿ, ಅಲ್ಪಸಂಖ್ಯಾತರರ ತುಷ್ಟೀಕರಣ ಧಿಕ್ಕರಿಸಿ ನಮ್ಮ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 142 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ. ಇದಕ್ಕೆ ಪಕ್ಷದ ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದರು.

ಒಂದೇ ವರ್ಷದಲ್ಲಿ ಸಾಕಷ್ಟು ಹಗರಣಗಳು:

ರಾಜ್ಯ ಕಾಂಗ್ರೆಸ್‌ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭ್ರಷ್ಟಾಚಾರ ಹಾಗೂ ಹಗರಣಗಳು ನಡೆದಿವೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಹಗರಣ ನಡೆದಿದೆ. ಮೈಸೂರಿನ ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರು ಸೇರಿದಂತೆ ಹಲವು ಮುಖಂಡರ ಹೆಸರು ಕೇಳಿ ಬರುತ್ತಿದೆ. ಇದು ಸುಮಾರು 3-4 ಸಾವಿರ ಕೋಟಿ ರು. ಮೊತ್ತದ ಹಗರಣವಾಗಿದೆ. ರಾಜ್ಯದ ಇತಿಹಾಸದಲ್ಲಿ ಎಷ್ಟು ದೊಡ್ಡ ಹಗರಣಗಳು ಎಂದೂ ನಡೆದಿರಲಿಲ್ಲ ಎಂದು ಕಿಡಿಕಾರಿದರು.

ಆಗಸ್ಟ್‌ ಬಳಿಕ ಜಿಲ್ಲಾ ಪ್ರವಾಸ:ಆಗಸ್ಟ್‌ ಬಳಿಕ ರಾಜ್ಯದ ಪ್ರತಿ ಜಿಲ್ಲೆಗೆ ನಾನು ಬರುತ್ತೇನೆ. ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷಕ್ಕೆ ಶಕ್ತಿ ತುಂಬವ ಕೆಲಸ ಮಾಡುತ್ತೇನೆ. ಪಕ್ಷವನ್ನು ಮುನ್ನಡೆಸುವಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಲಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಕೆಲವೇ ಶಾಸಕರಿಗಷ್ಟೇ ಅನುದಾನ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ದಿನೇ ದಿನೇ ಭ್ರಷ್ಟಾಚಾರಗಳು ನಡೆಯುತ್ತಿವೆ. ರಾಜ್ಯ ಲೂಟಿ ಮಾಡಿರುವ ಸರ್ಕಾರ, ಅಭಿವೃದ್ಧಿಗೆ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ತಮ್ಮ ಪಕ್ಷದ ಕೆಲವೇ ಶಾಸಕರಿಗಷ್ಟೇ ಅನುದಾನ ನೀಡಿದೆ. ಬೇರೆ ಪಕ್ಷದ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಈ ಅವೈಜ್ಞಾನಿಕ ಗ್ಯಾರಂಟಿ ತಲುಪಿಸಲು ಸಾಧ್ಯವಾಗದೆ ಪರದಾಡುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಶೂನ್ಯವಾಗಿದೆ. ಹಲವು ಕಂಪನಿಗಳು ಬೇರೆ ರಾಜ್ಯಗಳತ್ತ ಮುಖ ಮಾಡಿವೆ. ಈ ಸರ್ಕಾರ ಜನ ವಿರೋಧಿ ನೀತಿಗಳು, ಭ್ರಷ್ಟಾಚಾರದಲ್ಲಿ ಮುಳುಗಿದೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಅಧಿವೇಶನದಲ್ಲಿ ಹೋರಾಟ:

ಇದೇ ತಿಂಗಳ 15ರಿಂದ ಅಧಿವೇಶನ ಪ್ರಾರಂಭವಾಗಲಿದೆ. ವಿಪಕ್ಷ ನಾಯಕರು, ಶಾಸಕರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಒಳಗೆ ಹೋರಾಟ ಮಾಡಿ ಈ ಸರ್ಕಾರದ ಬಂಡವಾಳ ಬಯಲು ಮಾಡಬೇಕು. ಜನವಿರೋಧಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ಈ ಸರ್ಕಾರ ಎಷ್ಟು ದಿನ ಇರುವುದೋ ಗೊತ್ತಿಲ್ಲ. ಸಂಘಟಿತ ಹೋರಾಟದಿಂದ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿದ್ದೇವೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಯಲ್ಲಿ ಸಂಘಟಿತವಾಗಿ ಕೆಲಸ ಮಾಡಿ ಅಧಿಕಾರ ಹಿಡಿಯಬೇಕಿದೆ ಎಂದು ಹೇಳಿದರು.

Share this article