)
ಉಚ್ಚಿಲ : ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕುಸುರಿ ಕಲೆ ಪಾರ್ಕ್ ಸ್ಥಾಪಿಸಲು ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. ಅವರು ಗುರುವಾರ ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ವತಿಯಿಂದ ನಡೆಯುತ್ತಿರುವ 5ನೇ ಉಡುಪಿ ಉಚ್ಚಿಲ ದಸರಾದ ಮಹಿಳಾ ದಸರಾವನ್ನು ಉದ್ಘಾಟಿಸಿ ಮಾತನಾಡಿದರು.
ಅಲೆಗಳಿಲ್ಲದೇ ಸಮುದ್ರಕ್ಕೆ ಬೆಲೆ ಇಲ್ಲ, ಕರಾವಳಿ ಇಲ್ಲದೇ ಕರ್ನಾಟಕಕ್ಕೆ ನೆಲೆ ಇಲ್ಲ ಎಂದ ಸಿಎಂ, ಕರಾವಳಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ, ಕರಾವಳಿಯನ್ನು ಕೇರಳ, ಗೋವಾ ರಾಜ್ಯಗಳಿಗಿಂತಲೂ ದೊಡ್ಡ ವಿಶ್ವ ಪ್ರವಾಸೋದ್ಯಮ ಹಬ್ ಮಾಡುವಂತಹ ಪ್ರವಾಸೋದ್ಯಮ ನೀತಿ ತಯಾರಾಗುತ್ತಿದ್ದು, ಕರಾವಳಿಯ ಪ್ರತಿಭಾ ಪಲಾಯನ ತಪ್ಪಿಸಲು, ಹೊಸ ಉದ್ಯೋಗವಕಾಶ ಸೃಷ್ಟಿಸಲು, ಮಕ್ಕಳು ತಮ್ಮ ವಯೋವೃದ್ಧ ಹೆತ್ತವರೊಂದಿಗೆ ಉಳಿಯುವಂತೆ ಮಾಡುವ ನೀತಿಯನ್ನು ಸದ್ಯದಲ್ಲಿಯೇ ಘೋಷಣೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ, ಸಭೆಯಲ್ಲಿ ಮೊಗವೀರ ಮುಂದಾಳು ಡಾ. ಜಿ. ಶಂಕರ್ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಇಲ್ಲಿ ಘೋಷಣೆ ಮಾಡುವುದಿಲ್ಲ, ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಡಾ. ಜಿ. ಶಂಕರ್ ಇವತ್ತು ಎಷ್ಟೇ ದೊಡ್ಡ ಜನ ಆಗಿದ್ದರೂ, ತಮ್ಮ ಬೇರು ಮತ್ತು ಊರನ್ನು ಮರೆತಿಲ್ಲ, ಆದ್ದರಿಂದಲೇ ಈ ರೀತಿ ಊರಿನ ಸೇವೆ ಮಾಡುತಿದ್ದಾರೆ ಎಂದವರು ಶ್ಲಾಘಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಆರ್ಷದ್ ಮಾತನಾಡಿದರು, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ದಕ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್, ವಿಧಾವಸಭಾ ಉಪ ಸಭಾಪತಿ ಮಾಂಕಾಳ್ ವೈದ್ಯ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಮತ್ತು ಐವನ್ ಡಿಸೋಜ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಉದ್ಯಮಿಗಳಾದ ಆನಂದ ಸಿ. ಕುಂದರ್ ಆಗಮಿಸಿದ್ದರು.
ಮೊಗವೀರ ಗುರುವಿಗೆ ಪುಷ್ಪಾರ್ಚನೆ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೊದಲು ನೇರವಾಗಿ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರು, ನಂತರ ನವರಾತ್ರಿ ಬೃಹತ್ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು, ಅಲ್ಲಿಂದ ದೇವಳದ ಮುಂಭಾಗದಲ್ಲಿರುವ ಮೊಗವೀರ ಸಮುದಾಯದ ಕೊನೆಯ ಕುಲಗುರು ಶ್ರೀ ಮಾಧವ ಮಂಗಲ ಪೂಜಾರ್ಯರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು, ನಂತರ ಶ್ರೀ ಶಾರದೆ ಮತ್ತು ನವದುರ್ಗೆಯರಿಗೆ ಕೈ ಮುಗಿದು ವೇದಿಕೆಗೆ ಆಗಮಿಸಿದರು.
ಹೆಜಮಾಡಿ ಬಂದರು, ಮಂಗಳೂರು ಮೀನು ಮಾರುಕಟ್ಟೆ, ಡಿಸೇಲ್ ಸಬ್ಸಿಡಿ...: ಉಚ್ಚಿಲ ದಸರಾ ರೂವಾರಿ, ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನೋಡೋಜ ಡಾ. ಜಿ. ಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಜಮಾಡಿ ಬಂದರು ಕಾಮಾಗಾರಿ ಪೂರ್ಣಗೊಳಿಸಲು ಅಗತ್ಯವಿರುವ 35 ಕೋಟಿ ರು.ಗಳನ್ನು, ಮಂಗಳೂರು ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ 10 ಕೋಟಿ ರು. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.