ರಾಮನಗರ: ಅಭಿನಂದನಾ ಸಮಾರಂಭಗಳು ವ್ಯಕ್ತಿಯು ತನ್ನನ್ನು ತಾನು ಪ್ರದರ್ಶನ ಮಾಡಿಕೊಳ್ಳುವ ಸರಕಾಗಿರದೆ ಸಮಾಜಕ್ಕೆ ಒಂದು ಮಾದರಿಯ ಸಂದೇಶ ನೀಡುವಂತಿರಬೇಕು. ಸ್ವಾಮೀಜಿಗಳು ಮತ್ತು ಜಗದ್ಗುರುಗಳು ಸಹ ಅಭಿನಂದನೆಗಳ ಮೋಹಕ್ಕೆ ಬಿದ್ದಿದ್ದಾರೆ. ಅದಕ್ಕಾಗಿ ಭಕ್ತರನ್ನು ಪ್ರೇರೇಪಿಸಿ ನೂರಾರು ಪುಟಗಳ ಗ್ರಂಥ ಪ್ರಕಟಿಸುತ್ತಿದ್ದಾರೆ. ರಾಜಕಾರಣಿಗಳು ಸಹ ಅವರಿಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಸಾಹಿತಿ ಬೈರಮಂಗಲ ರಾಮೇಗೌಡ ವಿಷಾದಿಸಿದರು.
ನಗರದ ಎಂ.ಎಚ್.ಕಾಲೇಜು ಸಭಾಂಗಣದಲ್ಲಿ ಎಚ್.ವಿ.ಹನುಮಂತು ಕಲಾ ಬಳಗ ಹಾಗೂ ಅಂಕನಹಳ್ಳಿ ಪ್ರಕಾಶನ ಹಮ್ಮಿಕೊಂಡಿದ್ದ ಗಾಯಕ ಕೆಂಗಲ್ ವಿನಯಕುಮಾರ್ ಕುರಿತ "ಕೆಂಗಲ್ ಕೊರಳು'''''''' ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಭಿನಂದನಾ ಸಮಾರಂಭಗಳನ್ನು ಅನುಮಾನಿಸುವ ಸಂದರ್ಭದಲ್ಲಿ ನಡೆದಿರುವ ವಿನಯಕುಮಾರ್ ಅವರ ಅಭಿನಂದನಾ ಸಮಾರಂಭ ನಿಜಕ್ಕೂ ಅರ್ಥಪೂರ್ಣ. ಕಾಲೇಜು ದಿನಗಳಿಂದಲೂ ನಾನು ವಿನಯಕುಮಾರ್, ಎಚ್.ವಿ ಸಹೋದರರು, ಎಲ್.ಸಿ.ರಾಜು ಸೇರಿದಂತೆ ಹಲವರನ್ನು ನಾನು ಆರಂಭದಿಂದಲೂ ಬಲ್ಲೆ. ಸಾಮಾಜಿಕ ಬದಲಾವಣೆಯ ಬದ್ಧತೆ ಇರುವ ವ್ಯಕ್ತಿಗಳಿವರು. ವಿನಯಕುಮಾರ್ ಅವರ ಸಾಧನೆಯನ್ನು ನಾವು ಸಮಾಜಕ್ಕೆ ತಲುಪಿಸಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸಾಂಸ್ಕೃತಿಕ ಕಲೆಗಳು ಮನುಷ್ಯನನ್ನು ಉಲ್ಲಾಸಗೊಳಿಸಿ ಬದುಕಿಗೆ ಚೈತನ್ಯ ತುಂಬುತ್ತವೆ. ಕಲೆಯ ಮೂಲಕ ಸಾಮಾಜಿಕ ಬದಲಾವಣೆಗೆ ಹಲವು ಕಲಾವಿದರು ಶ್ರಮಿಸುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಹನುಮಂತು ಅವರ ಕಲಾ ಬಳಗದ ಕೊಡುಗೆ ದೊಡ್ಡದು. ಗಾಯಕ ವಿನಯಕುಮಾರ್ ಗೀತೆ ರಚನೆಕಾರ, ಹಿನ್ನೆಲೆ ಗಾಯಕ, ಸ್ವರ ಸಂಯೋಜಕರಷ್ಟೇ ಅಲ್ಲದೆ ಹೆಸರಿಗೆ ತಕ್ಕಂತೆ ವಿನಯವಂತ ವ್ಯಕ್ತಿತ್ವ ಉಳ್ಳವರೂ ಆಗಿದ್ದಾರೆ. ಕಲಾ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಮೇರು ಗಾಯಕ ಎಂದು ಪ್ರಶಂಸಿಸಿದರು.ಪುಸ್ತಕ ಕುರಿತು ಮಾತನಾಡಿದ ಲೇಖಕ ಕೊತ್ತಿಪುರ ಜಿ.ಶಿವಣ್ಣ, ಸರ್ಕಾರಿ ಸೇವೆ ಜೊತೆಗೆ ಕಲಾಸೇವೆ ಮಾಡಿಕೊಂಡು ಬಂದಿರುವ ವಿನಯಕುಮಾರ್ ಪ್ರತಿಭಾ ಸಂಪನ್ನತೆಯ ಗಾಯಕ. ತಮ್ಮ ಕಲೆಯನ್ನು ಎಲ್ಲರಿಗೂ ಹಂಚುತ್ತಾ ಬಂದವರು. ಪ್ರತಿಭಾ ವಿನಿಮಯದ ನೈಜ ವ್ಯಕ್ತಿತ್ವದ ಸಮಕಾಲೀನ ಚಿತ್ರಣವನ್ನು ವಿನಯಕುಮಾರ್ ಅವರ ಕುರಿತ ಪುಸ್ತಕ ಕಟ್ಟಿ ಕೊಡುತ್ತದೆ. ಕಲಾ ಕಾಯಕದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಗಾಯಕ. ಅವರು ಹಾಡುವುದನ್ನು ಬಿಟ್ಟರೆ ಮಾತನಾಡುವುದು ಕಮ್ಮಿ. ಅವರ ಮೌನವೂ ಒಂದು ರೀತಿಯ ಕ್ರಾಂತಿ. ಸಾಹಿತ್ಯದ ರಸಗಳನ್ನೇ ರಾಗಗಳಾಗಿ ಬಳಸಿಕೊಂಡು ಸಮಾಜದ ರೋಗಗಳಿಗೆ ಮದ್ದು ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿನಯಕುಮಾರ್ ಅವರ ಕಲಾ ಸೇವೆಯನ್ನು ಪರಿಗಣಿಸಿ "ಗಾನ ಗಾರುಡಿಗ " ಪ್ರಶಸ್ತಿ ಪ್ರದಾನ ಮಾಡಿದರು. ಗಣ್ಯರು ಪತ್ನಿ ನಾಗರತ್ನ ಅವರೊಂದಿಗೆ ಸನ್ಮಾನಿಸಿದರು. ಸಾಂಸ್ಕೃತಿಕ ಸಂಘಟಕ ರಾ.ಬಿ.ನಾಗರಾಜ್ ಅವರಿಗೆ ಸಾಂಸ್ಕೃತಿಕ ಧ್ರುವತಾರೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ವಾಣಿಜ್ಯ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ಕೆ.ದೊರೈ ಆಶಯ ನುಡಿಗಳನ್ನಾಡಿದರು. ಸಾಹಿತಿ ಎಚ್.ವಿ.ಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್, ಸಾಹಿತಿ ಡಾ.ಎಂ.ಭೈರೇಗೌಡ, ತಾಲೂಕು ಅಧ್ಯಕ್ಷ ಬಿಳಗುಂಬ ದಿನೇಶ್, ಲೇಖಕಿ ಶೈಲಾ ಶ್ರೀನಿವಾಸ್, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ನೃತ್ಯ ಗುರು ರೇಣುಕಾ ಪ್ರಸಾದ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಆರೋಗ್ಯ ಮೇಲ್ವಿಚಾರಣಾಧಿಕಾರಿ ಬಿ.ಎಸ್.ಗಂಗಾಧರ್ ಉಪಸ್ಥಿತರಿದ್ದರು.
24ಕೆಆರ್ ಎಂಎನ್ 5.ಜೆಪಿಜಿರಾಮನಗರದಲ್ಲಿ ನಡೆದ ಸಮಾರಂಭದಲ್ಲಿ ಗಾಯಕ ಕೆಂಗಲ್ ವಿನಯಕುಮಾರ್ ಅವರನ್ನು ಸನ್ಮಾನಿಸಲಾಯಿತು.