ಆನಂದಸ್ವಾಮಿ, ಆರ್.ವಿ.ಸುರೇಶ್ ಅವರಿಗೆ ಅಭಿನಂದನೆ ಸಲ್ಲಿಕೆ

KannadaprabhaNewsNetwork | Published : Mar 26, 2025 1:30 AM

ಸಾರಾಂಶ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಆನಂದಸ್ವಾಮಿ ಮತ್ತು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರ್.ವಿ. ಸುರೇಶ್ ಅವರನ್ನು ವಿವಿಧ ಮೋರ್ಚಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಂಗಳವಾರ ಗೌರವಿಸಿ, ಅಭಿನಂದನೆ‌ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಆನಂದಸ್ವಾಮಿ ಮತ್ತು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರ್.ವಿ. ಸುರೇಶ್ ಅವರನ್ನು ವಿವಿಧ ಮೋರ್ಚಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಂಗಳವಾರ ಗೌರವಿಸಿ, ಅಭಿನಂದನೆ‌ ಸಲ್ಲಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಸುಭದ್ರ ದೇಶ ಕಟ್ಟುವ ಸಿದ್ಧಾಂತವಿರಿಸಿಕೊಂಡಿರುವ ಬಿಜೆಪಿ ಪಕ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡು ಪಕ್ಷ ಕಟ್ಟುವ ಕೆಲಸ ಒಂದು ಪುಣ್ಯದ ಕೆಲಸವಾಗಿದೆ ಎಂದರು.

ನಮ್ಮ‌ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ನನ್ನ ಪಕ್ಷದ ನಿಷ್ಠೆಯನ್ನು ಗುರುತಿಸಿ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಯನ್ನು ಹುಸಿಗೊಳಿಸದೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವ ಪಣತೊಟ್ಟಿದ್ದೇನೆ ಎಂದರು.

ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರು ಹುದ್ದೆಗಳಿಗೆ ಜೋತು ಬೀಳದೆ ಪಕ್ಷದಲ್ಲಿ ಗುರುತಿಸಿಕೊಂಡರೆ ಒಂದಲ್ಲಾ ಒಂದು ದಿನ ತಮಗೆ ಜವಾಬ್ದಾರಿ ಸ್ಥಾನ‌ಗಳು ಸಿಗಲಿವೆ. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಬಂದರೆ ನಾವೇ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳೋಣ, ನಮಗೆ ಸಂಸದರಾಗಿ ಡಾ.ಸಿ.ಎನ್.ಮಂಜುನಾಥ್ ನಾಯಕರಾಗಿದ್ದು, ಪಕ್ಷ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಆನಂದಸ್ವಾಮಿ ಹೇಳಿದರು.

ಬಿಜೆಪಿ ರಾಜ್ಯ ಪರಿಷತ್ತು ಸದಸ್ಯ ಆರ್.ವಿ.ಸುರೇಶ್ ಮಾತನಾಡಿ, ಬಿಜೆಪಿ ಪಕ್ಷ ನೀಡಿರುವ ಜವಾಬ್ದಾರಿ ನನಗೆ ಸಂತಸ ತಂದಿದೆ. ಎಲ್ಲ ಪ್ರಮುಖರು ಸೇರಿ ಪಕ್ಷ ಗಟ್ಟಿ ಗೊಳಿಸುವ ಕೆಲಸವನ್ನು ಮಾಡೋಣ, ಪಕ್ಷದ ಎಲ್ಲಾ ಮೋರ್ಚಾಗಳ ಸಹಕಾರವಿರಲಿ ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಗದೀಶ್, ಹಿಂದುಳಿದ ಮೋರ್ಚಾದ ಅಧ್ಯಕ್ಷ ಸುರೇಶ್, ವೆಂಕಟರಮಣಪ್ಪ, ಕಾಳಪ್ಪ, ಆನಂದ್, ಭಾನುಪ್ರಕಾಶ್, ನಾಗಮ್ಮ ಮಾತನಾಡಿ, ಪಕ್ಷ ಸಂಘಟಿಸುವ ಪರಿಶ್ರಮದ ವ್ಯಕ್ತಿಯಾಗಿರುವ ಆನಂದಸ್ವಾಮಿ ಜಿಲ್ಲಾಧ್ಯಕ್ಷರಾಗಿರುವುದು ಶ್ಲಾಘನೀಯ, ಜೊತೆಗೆ ಸರಳ, ಸಜ್ಜನ ರಾಗಿರುವ ಆರ್.ವಿ.ಸುರೇಶ್ ಅವರು ರಾಜ್ಯ ಪರಿಷತ್ತು ಸದಸ್ಯರಾಗಿ ಆಯ್ಕೆಯಾಗಿರುವುದು ಪಕ್ಷದ ಸಂಘಟನೆಗೆ ಒಳ್ಳೆಯ ಬೆಳವಣಿಗೆಯಾಗಿದೆ. ನಾವು ಸಹ ನಮ್ಮ ಜವಾಬ್ದಾರಿಯನ್ನು ಅರಿತು ಪಕ್ಷವನ್ನು ಸದೃಢವಾಗಿ ಕಟ್ಟಲು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ಸಹ ವಕ್ತಾರ ರುದ್ರದೇವರು, ಜಿಲ್ಲಾ ಉಪಾಧ್ಯಕ್ಷ ಶಿವಾನಂದ, ಎಸ್ಸಿ/ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷ ರಾಜು, ಬಿಜೆಪಿ ವಕ್ತಾರ ಚೇತನ್, ರಾಘು, ಉಮೇಶ್, ನಾರಾಯಣಸ್ವಾಮಿ, ಜೆಡಿಎಸ್ ಮುಖಂಡರಾದ ಜಯ್ ಕುಮಾರ್, ಕೆಂಪರಾಜು ಸೇರಿದಂತೆ ಬಿಜೆಪಿಯ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದು ಅಭಿನಂದಿಸಿದರು.

-----------------------------

ಬಿಜೆಪಿ ಕಾರ್ಯಕರ್ತರ ಪಕ್ಷ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಐದು ತಾಲೂಕುಗಳಲ್ಲಿ ಸದೃಢವಾಗಿ ಬಿಜೆಪಿ ಪಕ್ಷವನ್ನು ಸಂಘಟಿಸಬಹುದು. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಚಿರಋಣಿ, ನಿಮ್ಮ ಸಲಹೆ - ಸಹಕಾರವನ್ನು ನಿರೀಕ್ಷಿಸುತ್ತೇನೆ. ಮುಂಬರುವ ಜಿಪಂ - ತಾಪಂ ಚುನಾವಣೆಗಳು ನಮಗೆ ಸವಾಲಾಗಿದ್ದು, ಅದರಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲು ಅಣಿಯಾಗಬೇಕು.

- ಆನಂದಸ್ವಾಮಿ, ಜಿಲ್ಲಾಧ್ಯಕ್ಷರು, ಬಿಜೆಪಿ.

Share this article