ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿಯ ಅಧಿಕಾರಿಗಳು ಈಗಾಗಲೇ ಸರ್ಕಾರದ ₹7 ಸಾವಿರ ಕೋಟಿ ಅನುದಾನ ನಿರೀಕ್ಷೆ ಇಟ್ಟುಕೊಂಡು ಬಜೆಟ್ ಮಂಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸೋಮವಾರ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಾಸಕರ ಸಭೆ ನಡೆಸಲಾದ ಬಳಿಕ ಬಜೆಟ್‌ನಲ್ಲಿ ಸಾಕಷ್ಟು ಬದಲಾವಣೆಗೆ ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಾ.27ರ ಗುರುವಾರದ ಬದಲಿಗೆ ಮಾ.28ರಂದು ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಬಿಬಿಎಂಪಿಯ ಆಡಳಿತಾಧಿಕಾರಿ, ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಬಜೆಟ್ ಮಂಡಿಸಲಿದ್ದಾರೆ.ದಾಖಲೆಯ ₹19 ಸಾವಿರ ಕೋಟಿ ಬಜೆಟ್?:
ಪ್ರಮುಖವಾಗಿ ₹40 ಸಾವಿರ ಕೋಟಿ ವೆಚ್ಚದ ಪೂರ್ವ-ಪಶ್ಚಿಮ ಹಾಗೂ ಉತ್ತರ- ದಕ್ಷಿಣ ಸುರಂಗ ಕಾರಿಡಾರ್ ಯೋಜನೆಗೆ ಬಜೆಟ್‌ನಲ್ಲಿ ಬುನಾದಿ ಹಾಕುವ ಸಾಧ್ಯತೆ ಇದೆ. ಜತೆಗೆ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ, ಕೆರೆ, ಪ್ರವಾಹ ನಿಯಂತ್ರಣ ಕಾಮಗಾರಿಗಳು, ವಿಶ್ವ ಬ್ಯಾಂಕ್ ನೆರವಿನ ಯೋಜನೆಗಳು ಬಿಬಿಎಂಪಿಯ ಬಜೆಟ್‌ನಲ್ಲಿ ಅಡಕವಾಗಿರುವ ಸಾಧ್ಯತೆ ಇದೆ. ಉಳಿದಂತೆ ಕಲ್ಯಾಣ ಯೋಜನೆಗಳು, ನಿರ್ವಹಣೆ ಕಾಮಗಾರಿ ಸೇರಿದಂತೆ ಮೊದಲಾದವುಗಳಿಗೆ ಅನುದಾನ ಮೀಸಲಿಡಲಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬಜೆಟ್ ಲೆಕ್ಕಾಚಾರಕಳೆದ 2024-25ನೇ ಸಾಲಿನಲ್ಲಿ ಬಿಬಿಎಂಪಿಯು ₹12,369 ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಸರ್ಕಾರ ಅನುಮೋದನೆ ವೇಳೆ ಹೆಚ್ಚುವರಿ ₹745 ಕೋಟಿ ನೀಡುವ ಭರವಸೆಯೊಂದಿಗೆ ₹13,114 ಕೋಟಿ ಗಾತ್ರಕ್ಕೆ ಹೆಚ್ಚಿಸಿ ಅನುಮೋದನೆ ನೀಡಿತ್ತು. ಸಾಮಾನ್ಯವಾಗಿ ಶೇ.5 ರಿಂದ 8ರಷ್ಟು ಬಜೆಟ್ ಗಾತ್ರ ವಾರ್ಷಿಕವಾಗಿ ಹೆಚ್ಚಿಸಲಾಗುತ್ತದೆ. ರಾಜ್ಯ ಸರ್ಕಾರ ಈ ಬಾರಿ ಹೆಚ್ಚುವರಿಯಾಗಿ ₹4 ಸಾವಿರ ಕೋಟಿ ಅನುದಾನ ನೀಡಿರುವುದರಿಂದ ಆಯವ್ಯಯ ಗಾತ್ರ ₹19 ಸಾವಿರ ಕೋಟಿ ಇರಲಿದೆ ಎಂದು ಮೂಲಗಳು ತಿಳಿಸಿವೆ.