ಕನ್ನಡಪ್ರಭ ವಾರ್ತೆ ಮೈಸೂರು
ಸಿಐಟಿಬಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ಮಾಜಿ ಸದಸ್ಯ ಡಿ. ಮಾದೇಗೌಡರನ್ನು ನಗರದ ಕಲಾಮಂದಿರದಲ್ಲಿ ಭಾನುವಾರ ಆತ್ಮೀಯವಾಗಿ ಅಭಿನಂದಿಸಲಾಯಿತು.ಮಾದೇಗೌಡ ಅಭಿನಂದನಾ ಸಮಿತಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ‘ಉಘೇ ಮಾದೇಗೌಡ್ರುಗೆ’ ಹೆಸರಿನ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಒಕ್ಕಲಿಗ ನಾಯಕತ್ವವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಒಕ್ಕಲಿಗರಿಗೆ ಒಕ್ಕಲಿಗರೇ ಮುಳುವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಹೋಗಬೇಕಿದೆ. ನಮ್ಮ ಒಕ್ಕಲಿಗ ನಾಯಕರನ್ನು ಪರಸ್ಪರ ಪ್ರೋತ್ಸಾಹ ನೀಡುವ ಮೂಲಕ ಬೆಳೆಸಬೇಕಿದೆ. ಹಿಂದೆ ಆಗಿರುವ ತಪ್ಪನ್ನು ಸರಿ ಮಾಡಬೇಕು ಎಂದರು.ಮೈಸೂರು ನಗರವನ್ನು ಯೋಜನಾ ಬದ್ಧವಾಗಿ ಕಟ್ಟಲು ಮಾದೇಗೌಡ ಅವರ ಕೊಡುಗೆ ಅಪಾರ. ಸ್ವಚ್ಛತೆ ಬಗ್ಗೆ ದೇಶಕ್ಕೆ ಮಾದರಿಯಾಗುವಂತಹ ಕೆಲಸವನ್ನೂ ಮಾಡಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಮಾತನಾಡಿ, ಡಿ. ಮಾದೇಗೌಡ ಅವರು ದೂರದೃಷ್ಟಿಯ ನಾಯಕರು. ಮೈಸೂರಿನ ಬೃಹತ್ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲು ಕಾರಣರಾದರು. ಯಾವುದೇ ಆಕರ್ಷಣೆಗೆ ಒಳಗಾಗದೇ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಮಾದೇಗೌಡ ಅವರು ನಮ್ಮಂತಹ ರಾಜಕಾರಣಿಗಳಿಗೆ ಮಾದರಿಯಾಗಿ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಮಾತನಾಡಿ, ಮಾದೇಗೌಡರು ಪ್ರತಿಯೊಬ್ಬರಿಗೂ ತಲೆಯ ಮೇಲೊಂದು ಸೂರು ಕೊಡಬೇಕು ಎಂಬ ಉದ್ದೇಶದಿಂದ ಆಶಾಮಂದಿರ ಯೋಜನೆ ರೂಪಿಸಿದ್ದರು. ಅದರಡಿ ಎಲ್ಲಾ ವರ್ಗದ ಜನರ ಮನೆ ಮನೆ ಬಾಗಿಲಿಗೆ ತೆರಳಿ, ಮನೆ ಹಾಗೂ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದರು. ಇದು ಅವರಿಗೆ ಬಹುದೊಡ್ಡ ಖ್ಯಾತಿ ತಂದುಕೊಟ್ಟಿದ್ದಾಗಿ ಹೇಳಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಾದೇಗೌಡರ ಸೇವೆಗೆ ಆದಿಚುಂಚನಗಿರಿ ಮಠವು ಚುಂಚಶ್ರೀ ಪ್ರಶಸ್ತಿ ನೀಡಿದರೆ, ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಸಂಘಟನೆಯ ಮೂಲಕ ಕುಂಬಾರಕೊಪ್ಪಲಿನಲ್ಲಿ ನೈರ್ಮಲ್ಯ ಘಟಕ ನಡೆಸುವುದರೊಂದಿಗೆ ಸೇವಾ ಕಾರ್ಯದಲ್ಲಿಯೂ ಸಕ್ರಿಯರಾಗಿದ್ದಾರೆ ಎಂದರು.ವೇದಿಕೆಯಲ್ಲಿ ನೆರೆದಿದ್ದ ರಾಜಕೀಯ ನಾಯಕರು ಸೇರಿದಂತೆ ಗಣ್ಯರೆಲ್ಲರೂ ಮಾದೇಗೌಡರ ಗುಣಗಾನ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು. ಅವರಂತೆ ಸೇವಾ ಮನೋಭಾವ ರೂಢಿಸಿಕೊಳ್ಳಲು ನಮಗೆ ಪ್ರೇರಣೆ ಆಗಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಾದೇಗೌಡ ದಂಪತಿಗಳನ್ನು ತೆರೆದ ಸಾರೋಟಿನಲ್ಲಿ ನಗರದ ಮೆಟ್ರೋಪೋಲ್ ವೃತ್ತದಿಂದ ಮೆರವಣಿಗೆಯಲ್ಲಿ ಕಲಾಮಂದಿರದವರೆಗೆ ಕರೆ ತರಲಾಯಿತು. ಈ ವೇಳೆ ನಾನಾ ಕಲಾ ತಂಡಗಳು ಇದ್ದು, ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.ಈ ವೇಳೆ ನಾನಾ ಸಂಘಟನೆಗಳ ಮುಖ್ಯಸ್ಥರೊಂದಿಗೆ ರಾಜಕೀಯ ನಾಯಕರು, ಮುಖಂಡರು ಮತ್ತು ಮಾದೇಗೌಡರ ಅಭಿಮಾನಿಗಳು ಮತ್ತು ಹಿತೈಷಿಗಳು ಮಾದೇಗೌಡ ಅವರನ್ನು ಅಭಿನಂದಿಸಿದರು. ಈ ವೇಳೆ ಮಾದರಿ ಮನೆಯ ಮಾದರಿಯನ್ನೇ ಊಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಡಾ. ಭಾಷ್ಯಂ ಸ್ವಾಮೀಜಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಅಭಿನಂದನಾ ಸಮಿತಿ ಅಧ್ಯಕ್ಷ ಎಂ.ವಿ. ದೇವಿ ಪ್ರಸಾದ್, ನಗರ ಪಾಲಿಕೆ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ, ಸಣ್ಣಸ್ವಾಮಿಗೌಡ, ಸತೀಶ್‌ಗೌಡ, ಎ. ರವಿ, ನಾಗರಾಜ ವಿ. ಬೈರಿ, ಮಾ. ವೆಂಕಟೇಶ್, ಮೊದಲಾದವರು ಇದ್ದರು.---
ಆಶಾ ಮಂದಿರ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿ ಲಕ್ಷಾಂತರ ಮಂದಿ ನಿವೇಶನ ಕಲ್ಪಿಸಿದೆ. ಅಂದು ಲಕ್ಷಾಂತರ ಜನರಿಗೆ ಸೂರು ಕೊಟ್ಟಂತಹ ಮುಡಾ ಇಂದು ಬಾಗಿಲು ಮುಚ್ಚಿರುವುದು ನಿಜಕ್ಕೂ ಬೇಸರದ ಸಂಗತಿ.-ಡಿ. ಮಾದೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರು.