ಕನ್ನಡಪ್ರಭ ವಾರ್ತೆ ಮೇಲುಕೋಟೆ
ಭೂ ವೈಕುಂಠ ರಾಮಾನುಜಾಚಾರ್ಯರ ಕರ್ಮಭೂಮಿ ದಿವ್ಯ ಸನ್ನಿಧಿಯಲ್ಲಿ ಮೂಲಮೂರ್ತಿ ಚೆಲ್ವತಿರುರಾಯಣಸ್ವಾಮಿಗೆ ಮಹಾಭಿಷೇಕ ವೈಭವದಿಂದ ನೆರವೇರಿತು.ವೈರಮುಡಿ ಜಾತ್ರಾ ಮಹೋತ್ಸವದ 10ನೇ ತಿರುನಾಳ್ ಅಂಗವಾಗಿ ಯದುಗಿರಿ ಅಧಿದೈವ ಚೆಲ್ವತಿರುನಾರಾಯಣಸ್ವಾಮಿಗೆ ಸೌರಮಾನದ ಮೀನಮಾಸದ ಚಿತ್ತಾನಕ್ಷತ್ರದ ಶುಭದಿನವಾದ ಭಾನುವಾರ ವೇದ ಮಂತ್ರಗಳೊಂದಿಗೆ ದ್ವಾದಶಾರಾಧನೆ ಮೂಲಕ ಮಹಾಭಿಷೇಕ ನೆರವೇರುವುದರೊಂದಿಗೆ ಹತ್ತುದಿನಗಳಿಂದ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವ ವಿಧ್ಯುಕ್ತವಾಗಿ ಸಂಪನ್ನವಾಯಿತು.
ಮುಂಜಾನೆಯೇ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಬ್ರಹ್ಮೋತ್ಸವದಲ್ಲಿ ಯಾವುದೇ ಲೋಪದೋಶಗಳು ನಡೆದಿದ್ದರೂ ಕ್ಷಮಿಸುವಂತೆ ಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಚಿನ್ನದದ್ವಜ ಸ್ಥಂಭದ ಬಳಿ ವಿಶೇಷ ಪರಿಹಾರ ಹೋಮ ನೆರವೇರಿಸಲಾಯಿತು. ಮೂಲಮೂರ್ತಿ ಉತ್ಸವಮೂರ್ತಿ ಅಳ್ವಾರ್‌ಗಳು ರಾಮಾನುಜಾಚಾರ್ಯರಿಗೆಗೆ ಹಾಲು, ಜೇನುಸ ಮೊಸರು, ಎಳನೀರು ಹರಿಷಿಣ, ಮಂಗಳ ದ್ರವ್ಯಗಳು ಸೇರಿದ ಪವಿತ್ರತೀರ್ಥಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಭಾನುವಾರವಾದ್ದರಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಮಹಾಭಿಷೇಕ ಮಧ್ಯೆ ಹಾಲು ಮತ್ತು ಪವಿತ್ರ ತೀರ್ಥದ ಅಭಿಷೇಕವೇಳೆ ಹಾಗೂ ಹರಿಷಿಣ ಅಲಂಕಾರದ ವೇಳೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು.ಒಂದು ಸಂವತ್ಸರದಲ್ಲಿ ಎರಡುಸಲ ಮಾತ್ರ ಮೂಲಮೂರ್ತಿಗೆ ಅಭಿಷೇಕ ನಡೆಯುವ ಸಂಪ್ರದಾಯವಿದ್ದು, ವಿಶ್ವಾವಸು ಸಂವತ್ಸರದ ಮೊದಲ ಮಹಾಭಿಷೇಕ ವೈರಮುಡಿ ಬ್ರಹ್ಮೋತ್ಸವದಲ್ಲಿ ಕೊನೆ ದಿನ ಅದ್ಧೂರಿಯಾಗಿ ನಡೆಯಿತು. ಇದೇ ಸಂವತ್ಸರದ ಆಷಾಡ ಮಾಸದಲ್ಲಿ ಮುಮ್ಮುಡಿ ಶ್ರೀಕೃಷ್ಣರಾಜಒಡೆಯರ್ ಜಯಂತ್ಯುತ್ಸವದಂದು ಎರಡನೇಭಾರಿ ಮಹಾಭಿಷೇಕ ನಡೆಯುತ್ತದೆ.
ಗರ್ಭಗೃಹ ಪ್ರದಕ್ಷಿಣೆ ಅವಕಾಶ:ವರ್ಷಕ್ಕೊಮ್ಮೆ ಚೆಲ್ವತಿರುನಾರಾಯಣಸ್ವಾಮಿ ಮೂಲಗರ್ಭಗುಡಿ ಪ್ರದಕ್ಷಿಣೆಗೆ ಮಹಾಭಿಷೇಕದ ರಾತ್ರಿ ಅವಕಾಶ ನೀಡಲಾಗುತ್ತಿದ್ದು, ಭಾನುವಾರ ರಾತ್ರಿ ಭಕ್ತರಿಗೆ ಪ್ರದಕ್ಷಿಣೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಹನುಮಂತವಾಹನೋತ್ಸವ ಉತ್ಸವಬೀದಿಗಳಲ್ಲಿ ಮೆರವಣಿಗೆ ಬರುವ ಸಮಯಾವಕಾಶದಲ್ಲಿ ಮಾತ್ರ ಪ್ರದಕ್ಷಿಣೆಗೆ ಅವಕಾಶವಿದ್ದ ಕಾರಣ ಅರ್ಧ ಗಂಟೆಯಲ್ಲಿ ನೂರಾರುಭಕ್ತರು ಗರ್ಭಗೃಹಪ್ರದಕ್ಷಿಣೆಯಲ್ಲಿ ಭಾಗವಹಿಸಿ ಧನ್ಯತಾಭಾವ ಅನುಭವಿಸಿದರು.
ಇಂದು ಶೇರ್ತಿಸೇವೆ:ಶ್ರೀಕೃಷ್ಣಬಲರಾಮರು ಚೆಲುವನಾರಾಯಣನನ್ನು ಆರಾಧಿಸಿದ ಪ್ರತೀಕವಾಗಿ ನಡೆಯುವ ಶೇರ್ತಿಸೇವೆ ಸೋಮವಾರ ನಡೆಯಲಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ - ಬಲರಾಮರು ಯದುಗಿರಿಗೆ ಆಗಮಿಸಿ ಚೆಲ್ವತಿರುನಾರಾಯಣಸ್ವಾಮಿಯನ್ನು ದರ್ಶನಮಾಡಿ ತಾವೇ ಆರಾಧಿಸುತ್ತಿದ್ದ ಉತ್ಸವಮೂರ್ತಿಯನ್ನು ದೇವಾಲಯಕ್ಕೆ ಸಮರ್ಪಿದರು ಎನ್ನುವ ಪುರಾಣದ ಉಲ್ಲೇಖದಂತೆ ಶೇರ್ತಿಸೇವೆ ನಡೆಯಲಿದೆ.
ಮೂಲಮೂರ್ತಿ ಮತ್ತು ಉತ್ಸವಮೂರ್ತಿ ವರ್ಷದಲ್ಲೊಮ್ಮೆ ಮಾತ್ರ ಒಂದೇಕಡೆ ಆರಾಧನೆಗೊಳ್ಳುವುದು ಶೇರ್ತಿಸೇವೆ ವಿಶೇಷವಾಗಿದೆ. ಇದಕ್ಕೂ ಮುನ್ನ ಮಹಾನಿವೇದನ ನಡೆಯಲಿದೆ. ಪಂಚಭಕ್ಷಪರಮಾನ್ನಗಳನ್ನು ತಯಾರಿಸಿ ಚೆಲುವನಾರಾಯಣಸ್ವಾಮಿಗೆ ಸಮರ್ಪಿಸಲಾಗುತ್ತದೆ. ಅಂದು ದೊಡ್ಡ ದೊಡ್ಡ ಹಂಡೆಗಳಲ್ಲಿ ತಯಾರಿಸಿದ ಪ್ರಸಾದವನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ ಎಂದು ದೇವಾಲಯದ ಇಒ ಶೀಲಾ ಮಾಹಿತಿ ನೀಡಿದ್ದಾರೆ.