-ಡಾ। ಪದ್ಮಿನಿ ನಾಗರಾಜು, ಬೆಂಗಳೂರು--
೨೭ನೆಯ ಡಿಸೆಂಬರ್ ೧೯೨೭ರಂದು ಮಧ್ಯಾಹ್ನ ಪರಿಷತ್ತನ್ನು ಮುಗಿಸಿ ಪ್ರತಿನಿಧಿಗಳು ಊಟಕ್ಕೆಂದು ಮಂಟಪಕ್ಕೆ ತೆರಳಿದರು ಹಾಗೂ ಡಾ। ಬಾಬಾಸಾಹೇಬ್ ಅಂಬೇಡ್ಕರ್ ಅವರು ವಾಸಿಸಲು ವ್ಯವಸ್ಥೆ ಮಾಡಿದ್ದ ಪರಿಷತ್ತಿನ ಆಫೀಸಿಗೆ ಹೋದರು. ಅವರಲ್ಲಿ ಹೋಗಿ ಕುಳಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಅವರನ್ನು ಕಾಣಲು ಹೆಂಗಸರ ದಂಡೇ ಬಂತು. ಈ ಹೆಂಗಸರು ಒಂಬತ್ತು ಹತ್ತು ಮೈಲಿಗಳಷ್ಟು ದೂರದಿಂದ ಡಾ। ಅಂಬೇಡ್ಕರ್ ಅವರನ್ನು ಕಾಣಲೆಂದೇ ಬಂದಿದ್ದರು. ಡಾ। ಅಂಬೇಡ್ಕರ್ ಅವರನ್ನು ಕಾಣುವ ಬಯಕೆ ಅವರಿಗೆಷ್ಟಿತ್ತೆಂದರೆ ಅವರಲ್ಲಿಯ ಕೆಲವು ಹೆಂಗಸರು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು.
ಎಷ್ಟು ಪ್ರೀತಿಯಿಂದ ಇಷ್ಟೊಂದು ಹೆಂಗಸರು ತನ್ನನ್ನು ಕಾಣಲು ಬಂದಿದ್ದಾರೆ ಅನ್ನುವುದರ ಲಾಭ ಪಡೆದು ಡಾ। ಅಂಬೇಡ್ಕರ್ ಅವರು ಅವರನ್ನೆಲ್ಲ ಕೂರಿಸಿ ‘ನಿಮಗೆ ಕೆಲವು ಸಮಾಜ ಹಿತದ ಮಾತುಗಳನ್ನು ನಾನು ಹೇಳಬಯಸುತ್ತೇನೆ. ಹಾಗಾಗಿ ನೀವು ಸಾಯಂಕಾಲ ಪರಿಷತ್ತಿಗೆ ಬನ್ನಿರೆಂದು ವಿನಂತಿಸಿಕೊಳ್ಳುತ್ತೇನೆʼ ಅಂದರು. ಅವರ ವಿನಂತಿಗೆ ಬೆಲೆ ಕೊಟ್ಟು ಎಲ್ಲ ಹೆಂಗಸರು ಅಲ್ಲಿಯೇ ಉಳಿದರು. ಮಧ್ಯಾಹ್ನ ನಿರ್ಧರಿಸಿದ್ದಂತೆ ಎಲ್ಲ ಮಹಿಳೆಯರು ಸಂಕೋಚಬಿಟ್ಟು ಮಂಟಪದಲ್ಲಿ ಬಂದು ಕುಳಿತಿದ್ದರು. ಅವರಿಗೆ ಕುಳಿತುಕೊಳ್ಳಲು ಮಧ್ಯದಲ್ಲಿ ಜಾಗ ಬಿಡಲಾಗಿತ್ತು. ಡಾ। ಅಂಬೇಡ್ಕರ್ ಅವರನ್ನುದ್ದೇಶಿಸಿ ಮಾತನಾಡುತ್ತಾ, ‘ನೀವೆಲ್ಲಾ ಈ ಸಭೆಗೆ ಬಂದಿರುವುದು ನೋಡಿ ನನಗೆ ತುಂಬಾ ಖುಷಿಯಾಗುತ್ತಿದೆ. ಮನೆಯ ಸಮಸ್ಯೆಗಳನ್ನು ಗಂಡು-ಹೆಣ್ಣು ಸೇರಿ ಬಿಡಿಸುವಂತೆ, ಸಮಾಜದ ಸಮಸ್ಯೆಗಳನ್ನು ಕೂಡ ಇವರಿಬ್ಬರೂ ಸೇರಿ ಬಿಡಿಸಬೇಕು. ಕೇವಲ ಗಂಡಸರೇ ಈ ಜವಾಬ್ದಾರಿಯನ್ನು ಹೊತ್ತರೆ ಅವರಿಗೆ ಸಮಯ ಬೇಕಾಗಬಹುದು ಅನ್ನುವುದರಲ್ಲಿ ಅನುಮಾನವಿಲ್ಲ. ಹೆಂಗಸರು ಈ ಕೆಲಸದಲ್ಲಿ ಬೇಗ ಯಶಸ್ಸು ಗಳಿಸಬಹುದು ಎಂದು ನನಗೆ ಅನ್ನಿಸುತ್ತದೆ. ತಾವೊಬ್ಬರೇ ಈ ಜವಾಬ್ದಾರಿ ವಹಿಸಲಾರೆ ಎನಿಸಿದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗಂಡಸರಿಗೆ ಸಹಾಯ ಮಾಡಬಹುದು. ಅದಕ್ಕಾಗಿ ನೀವು ಇನ್ನು ಮುಂದೆ ಪರಿಷತ್ತುಗಳಲ್ಲಿ ಭಾಗವಹಿಸಿ. ನಿಜ ಹೇಳಬೇಕೆಂದರೆ ಅಸ್ಪೃಶ್ಯತೆಯನ್ನು ತೊಲಗಿಸುವ ಕೆಲಸ ಗಂಡಸರದ್ದು ಅಲ್ಲ ಹೆಂಗಸರದ್ದೇ. ನೀವು ನಮ್ಮಂತಹ ಗಂಡಸರಿಗೆ ಜನ್ಮ ಕೊಟ್ಟಿದ್ದೀರಿ. ಜನರೆಲ್ಲ ನಮ್ಮನ್ನು ಹೇಗೆ ಪ್ರಾಣಿಗಿಂತಲೂ ಕಡೆಯಾಗಿ ಕಾಣುತ್ತಾರೆ ಅನ್ನುವುದು ನಿಮಗೆ ಗೊತ್ತಿದೆ. ನಮ್ಮ ನೆರಳು ಅವರಿಗೆ ಆಗುವುದಿಲ್ಲ. ಉಳಿದವರಿಗೆ ಕೋರ್ಟು ಕಚೇರಿಗಳಲ್ಲಿ ಗೌರವದ ಹುದ್ದೆಗಳು ಸಿಗುತ್ತದೆ. ಆದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಪೊಲೀಸ್ ಖಾತೆಯಲ್ಲಿ ಸಿಪಾಯಿ ಹುದ್ದೆಯು ಸಿಗುವುದಿಲ್ಲ ಅನ್ನುವಷ್ಟು ನಮ್ಮದು ಹೀನ ದರ್ಜೆಯಾಗಿದೆ. ಹೀಗೆಲ್ಲ ಇರುವಾಗ ನೀವು ಏಕೆ ನಮ್ಮನ್ನು ಹುಟ್ಟಿಸಿದ್ದೀರಿ ಅನ್ನುವ ಪ್ರಶ್ನೆಯನ್ನು ನಿಮ್ಮ ಮಕ್ಕಳು ಕೇಳಿದರೆ ನೀವೇನು ಉತ್ತರ ಹೇಳುವಿರಿ? ಇಲ್ಲಿ ಕುಳಿತಿರುವ ಕಾಯಸ್ಥ ಹಾಗೂ ಇತರ ಮೇಲ್ಜಾತಿಯ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ, ನಿಮ್ಮ ಹೊಟ್ಟೆಯಲ್ಲಿ ಹುಟ್ಟಿರುವ ನಮ್ಮಂತಹ ಮಕ್ಕಳಲ್ಲಿ ಯಾವ ವ್ಯತ್ಯಾಸವಿದೆ? ಬ್ರಾಹ್ಮಣ ಹೆಣ್ಣಿನಲ್ಲಿ ಇರುವಷ್ಟೇ ಶೀಲ ನಿಮ್ಮಲ್ಲೂ ಇದೆ. ಬ್ರಾಹ್ಮಣ ಹೆಣ್ಣಿನಲ್ಲಿರುವ ಪಾತಿವ್ರತ್ಯ ನಿಮ್ಮಲ್ಲೂ ಇದೆ ಅನ್ನುವುದರ ಬಗ್ಗೆ ನೀವು ಯೋಚಿಸಬೇಕು. ನಿಮ್ಮಲ್ಲಿರುವ ದೃಢ ನಿರ್ಧಾರ, ಮನೋಧೈರ್ಯ ಹಾಗೂ ಶಕ್ತಿ ಮಾತ್ರ ಬ್ರಾಹ್ಮಣ ಸ್ತ್ರೀಯರಲ್ಲಿ ಇಲ್ಲ. ಹೀಗಿರುವಾಗ ಬ್ರಾಹ್ಮಣ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಗೌರವ ಹಾಗೂ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಎಲ್ಲೆಡೆ ಉಪೇಕ್ಷೆ, ಅವಮಾನ. ನಿಮ್ಮ ಮಗುವಿಗೂ ಮನುಷ್ಯತ್ವದ ಹಕ್ಕು ಸಿಗಬಾರದೆ ಅನ್ನುವುದರ ಬಗ್ಗೆ ಎಂದಾದರು ಯೋಚಿಸಿದ್ದೀರಾ? ನನಗನಿಸಿದ ಮಟ್ಟಿಗೆ ನೀವು ಅದರ ಬಗ್ಗೆ ಎಂದೂ ಯೋಚಿಸಿಲ್ಲ’.‘ನೀವು ಯೋಚಿಸಿದ್ದೇ ಆಗಿದ್ದರೆ ಗಂಡಸರಿಗಿಂತ ಮೊದಲು ನೀವೇ ಸತ್ಯಾಗ್ರಹ ಪ್ರಾರಂಭ ಮಾಡುತ್ತಿದ್ದೀರಿ. ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ್ದೇವೆ ಅನ್ನುವುದಷ್ಟೇ ನಾವು ಮಾಡಿರುವ ಪಾಪ. ಇತರ ಹೆಂಗಸರ ಹೊಟ್ಟೆಯಲ್ಲಿ ಹುಟ್ಟುವುದು ಪುಣ್ಯವೇಕೆ ಆಗಬೇಕು ಅನ್ನುವುದರ ಬಗ್ಗೆ ನೀವು ಯೋಚಿಸಿದರೆ ಮುಂಬರುವ ಪೀಳಿಗೆಯನ್ನು ಹುಟ್ಟಿಸುವುದು ನಿಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ನಿಮ್ಮಿಂದ ಅವರಿಗೆ ತಗಲುವ ಕಳಂಕವಾದರೂ ತೊಳೆಯಬೇಕಾಗುತ್ತದೆ. ಇನ್ನು ಮುಂದೆ ಇಂತಹ ಕಳಂಕಿತ ಸ್ಥಿತಿಯಲ್ಲಿ ನಾವು ಬದುಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿ. ಸಮಾಜದ ಏಳಿಗೆ ಮಾಡುವುದಕ್ಕಾಗಿ ಗಂಡಸರು ನಿರ್ಧರಿಸುವಂತೆ ನೀವು ನಿರ್ಧರಿಸಿ.
‘ನೀವು ಮನೆಯ ಲಕ್ಷ್ಮಿಗಳು. ಮನೆಯಲ್ಲಿ ಯಾವುದೇ ರೀತಿಯ ಅಮಂಗಳವಾಗದಂತೆ ನೀವು ಎಚ್ಚರಿಕೆ ವಹಿಸಬೇಕು. ಕಳೆದ ಮಾರ್ಚ್ ತಿಂಗಳಿನಿಂದ ನೀವೆಲ್ಲರೂ ಸತ್ತ ಪ್ರಾಣಿಗಳ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದೀರಿ ಎನ್ನುವುದು ಸಂತೋಷದ ವಿಷಯ. ಆದರೆ, ಯಾವುದಾದರೂ ಕುಟುಂಬದಲ್ಲಿ ಇನ್ನೂ ತಿನ್ನುತ್ತಿದ್ದರೆ ಅದನ್ನು ನಿಲ್ಲಿಸುವ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಕು. ಸತ್ತ ಪ್ರಾಣಿಯ ಮಾಂಸವನ್ನು ನಿಮ್ಮ ಗಂಡ ಮನೆಗೆ ತಂದರೆ ಇಂತಹ ಅಮಂಗಲ ಪ್ರಕಾರ ಇನ್ನು ಮುಂದೆ ನನ್ನ ಮನೆಯಲ್ಲಿ ನಡೆಯುವುದಿಲ್ಲ ಎಂದು ಅವನಿಗೆ ಸ್ಪಷ್ಟವಾಗಿ ಹೇಳಿ. ನೀವು ಮನಸ್ಸು ಮಾಡಿದರೆ ಇಂತಹ ಘಟನೆಗಳನ್ನು ತಪ್ಪಿಸಬಹುದು ಎನ್ನುವ ಭರವಸೆ ನನಗಿದೆ. ಜೊತೆಗೆ, ನೀವು ನಿಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು. ಜ್ಞಾನ ಹಾಗೂ ವಿದ್ಯೆ ಇವೆರಡೂ ಕೇವಲ ಗಂಡಸರ ಸ್ವತ್ತಲ್ಲ. ಹೆಂಗಸರಿಗೂ ಕಡ್ಡಾಯವಾಗಿ ಸಿಗಬೇಕಂತದ್ದು ಅನ್ನುವುದನ್ನು ನಮ್ಮ ಪೂರ್ವಜರು ತಿಳಿದುಕೊಂಡಿದ್ದರು. ಇಲ್ಲದಿದ್ದರೆ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಪೂರ್ವಜರು ತಮ್ಮ ಹುಡುಗಿಯರಿಗೆ ವಿದ್ಯೆಯನ್ನು ಕಲಿಸುತ್ತಿರಲಿಲ್ಲ. ಫಲವತ್ತಾದ ಭೂಮಿಯಲ್ಲಿ ಬೆಳೆಯುವ ಬೆಳೆಯು ಫಲವತ್ತಾಗಿಯೇ ಬರುತ್ತದೆ ಅನ್ನುವುದನ್ನು ನೆನಪಿಟ್ಟು ನಿಮ್ಮ ಮುಂದಿನ ಪೀಳಿಗೆಯನ್ನು ಸುಧಾರಿಸಬೇಕು ಎಂದಿದ್ದರೆ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಕಲಿಸಲೇಬೇಕು. ನಾನು ಇಂದು ನಿಮಗೆ ಕೊಟ್ಟಿರುವ ಉಪದೇಶವನ್ನು ನೀವು ಗಾಳಿಗೆ ತೂರಲಾರಿರಿ ಎನ್ನುವ ಅಪೇಕ್ಷೆ ಇದೆ. ಆದಷ್ಟು ಬೇಗ ಅದನ್ನು ಜಾರಿಗೆ ತನ್ನಿ. ಹಾಗಾಗಿ, ನೀವು ಬೆಳಗ್ಗೆ ಮನೆಗೆ ಹೋಗುವ ಮೊದಲು ನೀವು ಸೀರೆ ಉಡುವ ರೀತಿಯನ್ನು ಬದಲಿಸಿ ತೋರಿಸಿದರೆ, ನಾನು ಹೇಳಿದ್ದು ಸಾರ್ಥಕ ಅಂದುಕೊಳ್ಳುತ್ತೇನೆʼ ಎಂದರು. ಮಹಿಳೆಯರು ಅವರ ಮಾತುಗಳಿಗೆ ತಾವು ಹಾಗೇ ಬದುಕುವುದಾಗಿ ಆಶ್ವಾಸನೆ ನೀಡಿದರು.ಅಸಾಧಾರಣ ಪರಿಣಾಮ ಬೀರಿದ ಭಾಷಣ
ಆಗಸ್ಟ್ ೩, ೧೯೪೨ರಲ್ಲಿ ಅಖಿಲ ಭಾರತ ನಿಮ್ನ ವರ್ಗಗಳ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಜಿ.ಟಿ.ಮೇಶ್ರಾಮ್ ಅವರಿಗೆ ಅಂಬೇಡ್ಕರ್ ಅವರು ಬರೆದ ಪತ್ರದಲ್ಲಿ ದಲಿತ ಮಹಿಳಾ ಪರಿಷತ್ತಿನ ಕುರಿತು ಹೀಗೆ ಹೇಳಿದ್ದಾರೆ, ‘ಮಹಿಳಾ ಸಮ್ಮೇಳನ ನನ್ನ ಮೇಲೆ ಅಪಾರ ಪ್ರಭಾವ ಮೂಡಿಸಿದೆ. ನಾನು ಮಹಿಳೆಯರ ಪಕ್ಷಪಾತಿ. ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂಬುದು ನನ್ನ ಬಯಕೆ. ಸಾವಿರಾರು ಮಹಿಳೆಯರು ಸಮ್ಮೇಳನದಲ್ಲಿ ಭಾಗವಹಿಸುವಂತಹ ಅದ್ಭುತ ದೃಶ್ಯವನ್ನು ದೇವರುಗಳೇ ನೋಡಬಯಸುತ್ತಾರೆ. ವಿಶೇಷವಾಗಿ ಅವರ ಉಡುಪುಗಳನ್ನು, ಸ್ವಚ್ಛತೆಯನ್ನು ಮತ್ತು ಆತ್ಮವಿಶ್ವಾಸದಿಂದ ಸಮ್ಮೇಳನದಲ್ಲಿ ನಡೆದುಕೊಂಡಿದ್ದನ್ನು ನೋಡಿ ಅಪಾರ ಸಂತೋಷವಾಯಿತುʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೊತೆಗೆ ಭಾಗವಹಿಸುತ್ತಿದ್ದ ಮಹಿಳೆಯರಿಗೆಲ್ಲ ಸ್ಪೂರ್ತಿದಾಯಕ ಮಾತುಗಳಾಗಿದ್ದವು. ಹೀಗೆ ಸಂದರ್ಭಗಳು ದೊರೆತಾಗಲೆಲ್ಲಾ ದಲಿತ ಮಹಿಳೆಯರನ್ನು ಜಾಗೃತಗೊಳಿಸುವ, ಅರಿವನ್ನು ಹೆಚ್ಚಿಸುವ, ಮಹಿಳೆಯರು ಶಿಕ್ಷಣ ಪಡೆಯಲು ಒತ್ತಾಸೆ ನೀಡಿದ ಮಹಾನ್ ನಾಯಕ ಬಾಬಾ ಸಾಹೇಬರು.ಹಿಂದೂ ಕೋಡ್ ಬಿಲ್ ತಂದ ಕ್ರಾಂತಿ
೨೦ನೇ ಶತಮಾನದಲ್ಲಿ ಪಿತ್ರಾರ್ಜಿತ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಅವರು. ಅವರು ಬಾಂಬೆ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ ದುಡಿಯುವ ಮಹಿಳೆಯರಿಗಾಗಿ ಮೆಟಿರ್ನಿಟಿ ರಜೆಯೊಂದಿಗೆ ಅನೇಕ ಸೌಲಭ್ಯಗಳನ್ನು ಮಹಿಳೆಯರಿಗಾಗಿ ಚಿಂತಿಸಿ ಅವುಗಳನ್ನು ೧೯೪೨ರಲ್ಲಿಯೇ ಜಾರಿಗೆ ತರುತ್ತಾರೆ. ಸಂವಿಧಾನದ ಮೂಲಕ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಅಧಿಕಾರ ನೀಡುವ ಮೂಲಕ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದರು. ಇಂದು ಮಹಿಳೆಗೆ ಮದುವೆ, ಮಕ್ಕಳು, ವಿಚ್ಛೇದನ ಇವೆಲ್ಲವೂ ತನ್ನದೇ ನಿರ್ಧಾರ ಎಂದು ಬದುಕುವ ಸ್ವಾತಂತ್ರ್ಯ ಸಿಕ್ಕಿದೆ.ಮಹಿಳೆಯರ ಸ್ವಾಭಿಮಾನದ ಮೂಲ