ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ರದ್ದುಪಡಿಸಿ ವಿಬಿ ಜಿ ರಾಮ್‌ ಜಿ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ರದ್ದುಪಡಿಸಿ ವಿಬಿ ಜಿ ರಾಮ್‌ ಜಿ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಬಿ ಜಿ ರಾಮ್‌ ಜಿ ಬದಲಿಗೆ ಮನರೇಗಾ ಅಡಿಯಲ್ಲೇ ರಾಜ್ಯದಲ್ಲಿ ಪ್ರಸಕ್ತ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜತೆಗೆ, ರಾಜ್ಯಗಳ ಜತೆ ಚರ್ಚಿಸದೆ ಏಕಪಕ್ಷೀಯವಾಗಿ ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್‌ ಜಿ ಯೋಜನೆ ಜಾರಿ ಮಾಡಿರುವ ಕೇಂದ್ರದ ಧೋರಣೆ ವಿರುದ್ಧವೂ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಹೋರಾಟ ಮತ್ತೊಂದು ಹಂತಕ್ಕೆ

ಆ ಮೂಲಕ ವಿಬಿ ಜಿ ರಾಮ್‌ ಜಿ ಯೋಜನೆ ಖಂಡಿಸಿ ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿದ್ದ ಕಾಂಗ್ರೆಸ್‌ ಸರ್ಕಾರ ತನ್ನ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ಪ್ರಸಕ್ತ ಸಾಲಿನಲ್ಲಿ ಮನರೇಗಾದಲ್ಲಿ ಯಥಾಸ್ಥಿತಿ ಮುಂದುವರಿಸುವ ಸಲುವಾಗಿ ಅಗತ್ಯ ಕ್ರಿಯಾಯೋಜನೆ ರೂಪಿಸಲು ಅವಕಾಶ ಕಲ್ಪಿಸುವಂತೆ ನ್ಯಾಯಾಲಯವನ್ನು ಕೋರಲು ತೀರ್ಮಾನಿಸಲಾಗಿದೆ. ಜತೆಗೆ ಮನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್‌ ಜಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕೈಗೊಂಡ ತೀರ್ಮಾನದ ಮೂಲಕ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ದಮನಗೊಳಿಸಿರುವುದನ್ನು ಸಹ ಪ್ರಶ್ನಿಸಲಾಗುವುದು ಎಂದರು.

ಪರ್ಯಾಯ ವ್ಯವಸ್ಥೆ ಮಾಡಿಲ್ಲ-ಎಚ್ಕೆಪಿ:

2005ರಲ್ಲಿ ಜಾರಿಗೆ ತಂದಿದ್ದ ಮನರೇಗಾ ಕಾಯ್ದೆ ರದ್ದುಗೊಳಿಸಿ, ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ವಿಬಿ ಜಿ ರಾಮ್‌ ಜಿ ಜಾರಿಗೊಳಿಸಲು ಈವರೆಗೆ ಅಧಿಸೂಚನೆ ಹೊರಡಿಸಿಲ್ಲ ಹಾಗೂ ಪರ್ಯಾಯ ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದ ಗ್ರಾಮೀಣ ಜನರ ಉದ್ಯೋಗ ಹಕ್ಕು ಕಸಿದಂತಾಗಿದೆ ಎಂದು ಎಚ್.ಕೆ. ಪಾಟೀಲ್‌ ಹೇಳಿದರು.

ಕೇಂದ್ರ ಸರ್ಕಾರವು ವಿಬಿ ಜಿ ರಾಮ್‌ ಜಿ ಯೋಜನೆ ಜಾರಿ ಮಾಡಿಲ್ಲ. ಬದಲಿಗೆ ಮನರೇಗಾ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ರಾಜ್ಯಗಳಿಗೆ ಹೇಳಿದೆ. ಈ ವರ್ಷದ ಕಾಮಗಾರಿಗಳಿಗೆ ಅವಕಾಶ ನೀಡಿಲ್ಲ. ಹೀಗಾಗಿ ಮನರೇಗಾ ಮುಂದುವರಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅನಿವಾರ್ಯ. ಈ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರ್ಟ್‌ ಮೊರೆಹೋಗಲು ಸರ್ಕಾರ ತೀರ್ಮಾನಿಸಿದ್ದೇವೆ ಎಂದರು.

ಹಿಂದಿನ ಮನರೇಗಾಗೆ ಮನವಿ:

ಮನರೇಗಾ ಎಂಬುದು ಕೇಂದ್ರ ಪುರಸ್ಕೃತ ಯೋಜನೆ. ಅದನ್ನು ಯಥಾವತ್ತಾಗಿ ಮುಂದುವರಿಸಲು ಅಗತ್ಯ ಕ್ರಿಯಾಯೋಜನೆ ರೂಪಿಸಲು ಕಾನೂನು ಮೊರೆ ಹೋಗುತ್ತಿದ್ದೇವೆ. ಆದಷ್ಟು ಬೇಗ ಕೋರ್ಟ್‌ನಲ್ಲಿ ಸರ್ಕಾರ ಪ್ರಶ್ನಿಸಲಿದೆ. ಅನುದಾನ ಹಂಚಿಕೆ ಕೂಡ ಮನರೇಗಾ ಅಡಿ ಜಾರಿಯಲ್ಲಿ ಇದ್ದಂತೆಯೇ ಇದಕ್ಕೂ ಅನ್ವಯ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ರಾಜ್ಯದ ಸರ್ಕಾರದ ಆರೋಪವೇನು?:

ಕೇಂದ್ರ ಸರ್ಕಾರವು ಮನರೇಗಾ ಅಡಿ 90:10 ರಷ್ಟಿದ್ದ ಕೇಂದ್ರ ಹಾಗೂ ರಾಜ್ಯದ ಅನುದಾನ ಹಂಚಿಕೆಯನ್ನು ವಿಬಿ ಜಿ ರಾಮ್‌ ಜಿ ಅಡಿ 60:40 ಅನುಪಾತಕ್ಕೆ ಬದಲಿಸಿದೆ. ಇದು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೇರಲಿದೆ. ಮನರೇಗಾ ಅಡಿ ವರ್ಷದ 365 ದಿನಗಳ ಕಾಲ ಕೆಲಸ ಕೇಳಬಹುದಿತ್ತು. ಕಾರ್ಮಿಕರು ಅವರ ಊರಿನಲ್ಲೇ ಸ್ವಂತ ಜಮೀನಿನಲ್ಲೇ ಕೆಲಸ ಮಾಡಬಹುದಿತ್ತು. ಹೊಸ ಕಾಯ್ದೆ ಅಡಿ ಅದು ಸಾಧ್ಯವಿಲ್ಲ ಎಂಬುದು ಸೇರಿ ನೂತನ ಯೋಜನೆ ಬಗ್ಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕ್ರೀಡಾ ಸಾಧಕರಿಗೆ ಸಿವಿಲ್‌ ಹುದ್ದೆಗಳಲ್ಲಿ ಶೇ.2 ಮೀಸಲಾತಿ

ಬೆಂಗಳೂರು: ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್‌ ಸೇವೆಗಳಲ್ಲಿ ಹುದ್ದೆಗಳ ನೇಮಕಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ.