ಕನ್ನಡಪ್ರಭ ವಾರ್ತೆ ಆಲೂರು
ದೇವಾಲಯಗಳು ಮನುಷ್ಯರಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ಧಾರ್ಮಿಕ ಆಚರಣೆ ಕೇಂದ್ರಗಳು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ಪಾಳ್ಯ ಹೋಬಳಿ ಚಿಗಳೂರು ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ನೂತನ ರಜತ ಕವಚ ಧಾರಣೆ ಹಾಗೂ ಬಂಟನ ದೇವಸ್ಥಾನ ಉದ್ಘಾಟನೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಪಂಚ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದರೂ ಧಾರ್ಮಿಕ ಭಾವನೆಗಳ ಆಧಾರದಲ್ಲಿ ನಡೆಯುತ್ತಿವೆ. ನಮ್ಮ ದೇಶದ ಜನರು ದೇವಸ್ಥಾನ ಮಠ ಮಂದಿರಗಳನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಹೀಗಾಗಿ ದೇವಸ್ಥಾನದ ಉದ್ಘಾಟನೆ ವೇಳೆ ಪಾವಿತ್ರ್ಯತೆಗೆ ನೀಡುವ ಮಹತ್ವವನ್ನು ಮುಂದಿನ ದಿನಗಳಲ್ಲಿ ಕಾಪಾಡಿಕೊಂಡು ಹೋಗಬೇಕು. ಪ್ರತಿಕ್ಷಣ, ಪ್ರತಿನಿಮಿಷ ದೇವರ ಸ್ಮರಣೆ ಮಾಡುತ್ತಾ ನಮ್ಮ ಕರ್ತವ್ಯ ನಿರ್ವಹಿಸಿದರೆ ಯಾವ ಕಷ್ಟವೂ ಸುಳಿಯುವುದಿಲ್ಲ. ಜೀವನದಲ್ಲಿ ನೆಮ್ಮದಿ ಕಂಡುಕೊಂಡಾಗ ಯಾವುದೇ ಕಷ್ಟಕಾರ್ಪಣ್ಯಗಳಿಲ್ಲದೆ ಸುಖಜೀವನ ನಡೆಸಬಹುದು.
ಧಾರ್ಮಿಕ ಆಚರಣೆ ಮತ್ತು ದೇವಾಲಯಗಳು ಗ್ರಾಮದ ಜನರನ್ನು ಒಟ್ಟುಗೂಡಿಸಿ ನೆಮ್ಮದಿ ಜೀವನಕ್ಕೆ ದಾರಿ ಮಾಡಿಕೊಡುತ್ತವೆ. ಗ್ರಾಮದ ಮುಖಂಡರು ಗ್ರಾಮಕ್ಕೆ ಆಗಬೇಕಾಗಿರುವ ಮೂಲಭೂತ ಸೌಕರ್ಯ ಬಗ್ಗೆ ಗಮನ ಸೆಳೆದಿದ್ದಾರೆ. ತಮಗೆಲ್ಲರಿಗೂ ತಿಳಿದಿರುವಂತೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಬರುವ ಅನುದಾನದಲ್ಲಿ ಎಲ್ಲಾ ಗ್ರಾಮಕ್ಕೂ ಯಾವುದೇ ತಾರತಮ್ಯ ಮಾಡದೇ ಅವಶ್ಯಕತೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ವಿ.ಲಿಂಗರಾಜು, ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಅಚ್ಚಗೌಡನಹಳ್ಳಿಯವರೆಗೆ ರಸ್ತೆ ದುರಸ್ತಿಯಾಗಬೇಕು. ಕಳೆದ ಎರಡು ವರ್ಷಗಳಿಂದ ಸುರಿದ ಮಳೆಗೆ ಗ್ರಾಮದ ಮುಖ್ಯ ರಸ್ತೆ ಗುಂಡಿ ಬಿದ್ದು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ಕಲ್ಯಾಣಗೌಡ, ಕೆ.ಎಂ.ಎಫ್ ನಿರ್ದೇಶಕ ಪಿ.ಎಲ್. ನಿಂಗರಾಜ್, ಹನುಮಂತೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಅಂಬುಜಾ, ಅರ್ಚಕ ಗಿರೀಶ್, ಮಾಜಿ ಸದಸ್ಯ ಸಿ.ಎಲ್. ಕುಮಾರಸ್ವಾಮಿ, ದೇವರಾಜು ಉಪಸ್ಥಿತರಿದ್ದರು.