ಕನ್ನಡಪ್ರಭ ವಾರ್ತೆ ಪಾಂಡವಪುರ
ಅಭಿನಂದನೆ ಸ್ವೀಕರಿಸಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ದಿನಗಳಲ್ಲಿ ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ಸರ್ಕಾರಿ ಶಾಲೆ ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಪರಿಶ್ರಮದಿಂದ ಬಹಳ ಅದ್ಧೂರಿಯಾಗಿ ಸಮಾರಂಭವನ್ನು ಆಚರಣೆ ಮಾಡಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲೂ ಚಂದಾ ಎತ್ತಿಕೊಂಡು ರಾಜ್ಯದ ಮಟ್ಟದ ಸಾಹಿತಿಗಳು, ಸ್ವಾಮೀಜಿಗಳು, ಚಿತ್ರನಟರನ್ನು ಆಹ್ವಾನಿಸಿ ವಿಜೃಂಭಣೆಯಿಂದ ಆಚರಣೆ ಮಾಡಿರುವುದು ಜಿಲ್ಲೆಯೇ ಖುಷಿಪಡುವ ಸಂಗತಿಯಾಗಿದೆ. ನಾನು ಜಿಪಂ ಸದಸ್ಯ, ಮೂರು ಬಾರಿ ಶಾಸಕ, ಸಂಸದ, ಸಚಿವನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಬನ್ನಂಗಾಡಿ ಗ್ರಾಮಸ್ಥರು ನನಗೆ, ನಮ್ಮ ಕುಟುಂಬಕ್ಕೆ ತಾಯಿ ಮನೆಯ ಪ್ರೀತಿ ತೋರಿಸಿದ್ದಾರೆ. ಗ್ರಾಮಸ್ಥರು, ಶತಮಾನೋತ್ಸವ ಸಮಿತಿಯ ಸದಸ್ಯರು ಪ್ರೀತಿಯಿಂದ ಅಭಿನಂದಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮದ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಮಿತಿಯ ಸದಸ್ಯ ಬಿ.ಪಿ.ಶ್ರೀನಿವಾಸ್ ಮಾತನಾಡಿ, ಶತಮಾನೋತ್ಸವ ಕಾರ್ಯಕ್ರಮದ ಪೂರ್ವವಾಗಿ ಸಮಿತಿಯ ಎಲ್ಲಾ ಸದಸ್ಯರು, ಗ್ರಾಮಸ್ಥರು ಪಕ್ಷಾತೀತವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಭೇಟಿಮಾಡಿ ಕಾರ್ಯಕ್ರಮ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದೆವು. ಆ ಸಂದರ್ಭದಲ್ಲಿ ಶಾಸಕರು ದಿನಾಂಕ ನೀಡುವ ಜತೆಗೆ ಶಾಲೆಯ ಕಾಂಪೌಂಡ್ ಗೆ ಬಣ್ಣ ಹೊಡೆಸುವ ಜತೆಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.ಆ ಬಳಿಕ ಮೂರ್ನಾಲ್ಕು ಬಾರಿ ಭೇಟಿ ಕೊಟ್ಟು ನೆರವು ಕೇಳಿದರೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಪಂದಿಸಲಿಲ್ಲ. ಆರ್ಥಿಕ ನೆರವನ್ನೂ ನೀಡಲಿಲ್ಲ. ಅವರ ತಾಯಿ ಸುನೀತಾ ಪುಟ್ಟಣ್ಣಯ್ಯ ಅವರು ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆನಂತರ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಭೇಟಿ ಮಾಡಿ ನೆರವು ಕೇಳಿದೆವು. ತಕ್ಷಣವೇ ಸಿ.ಎಸ್.ಪುಟ್ಟರಾಜು ಅವರು ಸ್ಪಂದಿಸಿ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡುವ ಜತೆಗೆ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ನಿಂತು ಯಶಸ್ವಿಗೆ ಶ್ರಮಿಸಿದ್ದಾಗಿ ಹೇಳಿದರು.
ಆ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು, ಶತಮಾನೋತ್ಸವ ಶಾಲಾ ಸಮಿತಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದೇವೆ. ಕಾರ್ಯಕ್ರಮದ ನಮ್ಮ ಭಾಗದ 16 ಗ್ರಾಮಗಳ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಆರ್ಥಿಕ ನೆರವು ನೀಡುವ ಜತೆಗೆ ಯಶಸ್ವಿಗೆ ಶ್ರಮಿಸಿದ್ದಾರೆ. ಬಿ.ಆರ್.ಪ್ರಸನ್ನ ಸ್ನೇಹಿತರು ಹೂವಿನ ಅಲಂಕಾರ ಹಾಗೂ ಶಬರಿ ಗ್ರೂಪ್ ನವರು ಸೇರಿದಂತೆ ಅನೇಕರು ಯಶಸ್ಸಿಗೆ ಶ್ರಮಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಮುಖಂಡರಾದ ಬಿ.ಡಿ.ಹುಚ್ಚೇಗೌಡ, ಬಿ.ಪಿ.ಶ್ರೀನಿವಾಸ್, ಕರೀಗೌಡ, ಶಿವೇಗೌಡ, ಬಿ.ಆರ್.ಪ್ರಸನ್ನ, ಬಿ.ಎನ್.ವಿಶ್ವನಾಥ್, ಬಿ.ಜಿ.ಪ್ರಕಾಶ್, ಬಿ.ಎಸ್.ಕೃಷ್ಣೇಗೌಡ, ಚಲುವೇಗೌಡ, ವೆಂಕಟೇಶ್, ವಿಎ ದಿನೇಶ್, ಸರ್ವೇಸುರೇಶ್, ಐ.ಸಿ.ಪ್ರಸನ್ನ, ನಂಜುಂಡೇಗೌಡ, ರಾಮೇಗೌಡ, ಲೋಕೇಶ್, ಕೀರ್ತಿ, ದೇವರಾಜು, ಧನಂಜಯ, ಸಂತು, ವಿಶ್ವನಾಥ್, ಅಣ್ಣಯ್ಯ, ಬಿ.ಎನ್.ನಂದೀಶ್, ವಾಸು, ಬಿ.ಜೆ.ನಾಗೇಶ್, ಖಾಟ ಸ್ವಾಮಿಗೌಡ, ನಾರಯಣ, ರಜಿನಿಕಾಂತ್, ಕೇಬಲ್‌ರವಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವೃಂದ, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಹಲವರು ಇದ್ದರು.