ಬ್ಯಾಡಗಿ:ರೈತರು ಬೆಳೆದಂತಹ ಗೋವಿನಜೋಳ ಪ್ರತಿ ರೈತನಿಂದ 50 ಕ್ವಿಂಟಲ್ ಮಿತಿ ಹೆಚ್ಚಳ ಮಾಡಿದ್ದಲ್ಲದೇ, ಪ್ರತಿ ಕ್ವಿಂ. ₹ 2400 ಎಂಎಸ್‌ಪಿ ದರದಲ್ಲಿ ಖರೀದಿಸಲು ನಿರ್ಧರಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸವರಾಜ ಶಿವಣ್ಣನವರ ಸ್ವಾಗತಿಸಿದ್ದಾರೆ.
ಜಿಲ್ಲೆಯ ಶಾಸಕರ ಮನವಿಗೆ ಸ್ಪಂದನೆ: ಜಿಲ್ಲೆಯಲ್ಲಿನ ರೈತಪರ ಸಂಘಟನೆಗಳು ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರೂ ಸೇರಿದಂತೆ ಜಿಲ್ಲೆಯ ಎಲ್ಲಾ ಆರು ಜನ ಶಾಸಕರು ಸೇರಿಕೊಂಡು ಮುಖ್ಯಮಂತ್ರಿಗಳಿಗೆ ನಮ್ಮ ವಿಚಾರಗಳನ್ನು ಮಂಡಿಸಿದ್ದೆವು, ಆದರೆ ಕೆಲವೊಂದು ತಾಂತ್ರಿಕ ಕಾರಣಗಳ ದೃಷ್ಟಿಯಿಂದ ಮತ್ತು ವಾಸ್ತವ ಸಂಗತಿಗಳ ಮಾಹಿತಿ ಕೊರತೆಯಿಂದಾಗಿ ದಿಢೀರನೇ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಸಹಜವಾಗಿ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದರು.ಸರ್ಕಾರದ ನಿರ್ಧಾರ ಸೂಕ್ತವಾಗಿದೆ: ಪ್ರಸ್ತುತ ವರ್ಷದ ರೈತರ ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಅತೀವೃಷ್ಟಿಯಿಂದಾಗಿ ನಿಗದಿತ ಪ್ರಮಾಣದಲ್ಲಿ ಇಳುವರಿ ಬಾರದೇ ಸಂಕಷ್ಟದಲ್ಲಿದ್ದರು. ಹೀಗಾಗಿ ಬೆಳದಂತಹ ಅಷ್ಟಿಷ್ಟು ಗೋವಿನಜೋಳವು ಕೂಡ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರ ಸಿಗದಂತಾದ ಹಿನ್ನೆಲೆಯಲ್ಲಿ ರೈತ ಸಂಘವು ಕೃಷಿಕರ ನೆರವಿಗೆ ಬರುವಂತೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ 50 ಕ್ವಿಂಟಲ್ ಗೋವಿನ ಜೋಳ ಖರೀದಿಗೆ ಮುಂದಾಗಿದ್ದಲ್ಲದೇ ಎಸ್ ಎಂ ಪಿ ದರ 2400 ಪ್ರತಿ ಕ್ವಿಂಟಲ್ ಗೆ ಖರೀದಿಸಲು ನಿರ್ಧರಿಸಿದ್ದು ಅತ್ಯಂತ ಸೂಕ್ತವಾಗಿದೆ ಎಂದರು. ಈ ವೇಳೆ ಮುಖಂಡರಾದ ದಾನಪ್ಪ ಚೂರಿ, ಬೀರಣ್ಣ ಬನಕಾರ, ಚನ್ನಬಸಪ್ಪ ಹುಲ್ಲತ್ತಿ, ಶಂಭನಗೌಡ ಪಾಟೀಲ, ರಮೇಶ ಸುತ್ತಕೋಟಿ, ದುರ್ಗೇಶ ಗೋಣೆಮ್ಮನವರ, ಡಿ.ಎಚ್.ಬುಡ್ಡನಗೌಡ್ರ, ಮಾರುತಿ ಅಚ್ಚಿಗೇರಿ, ಖಾದರಸಾಬ್ ದೊಡ್ಮನಿ ಹಾಗೂ ಇನ್ನಿತರರಿದ್ದರು.