ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇಂದಿನ ಯುವಪೀಳಿಗೆ ಮೊಬೈಲ್ ಗೆ ಹೆಚ್ಚು ಆಕರ್ಷಿತರಾಗುವುದನ್ನು ಬಿಟ್ಟು ಪುಸ್ತಕಗಳತ್ತ ಮುಖ ಮಾಡಬೇಕು, ಪೋಷಕರು ಸಹ ತಮ್ಮ ಮಕ್ಕಳ ಮೇಲೆ ಹೆಚ್ಚು ಗಮನಹರಿಸಬೇಕು ಎಂಬ ನಿಟ್ಟಿನಲ್ಲಿ ಪುಸ್ತಕ ಪ್ರಾಧಿಕಾರ ಮುಂದಾಗಿದ್ದು, ಮನೆಗೊಂದು ಗ್ರಂಥಾಲಯ ಇರಲಿ ಎಂಬ ಕಾರ್ಯಕ್ರಮ ರೂಪಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ಹೇಳಿದರು.ಮನೆಗೊಂದು ಗ್ರಂಥಾಲಯ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಪಟ್ಟಣದ ಸಾಹಿತಿ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಪಳನಿಸ್ವಾಮಿ ಜಾಗೇರಿ ಅವರ ನಿವಾಸದಲ್ಲಿ ಚಾಲನೆ ನೀಡಿ ಮಾತನಾಡಿದರು.ಪಳನಿಸ್ವಾಮಿ ಜಾಗೇರಿ ಹಾಗೂ ಅವರ ಪತ್ನಿ ಸೆಲ್ವಿಬಾಯಿ ದಂಪತಿ ಮನೆಯಲ್ಲೇ ಗ್ರಂಥಾಲಯ ಸ್ಥಾಪಿಸಿರುವುದು ಹೆಮ್ಮೆಯ ವಿಚಾರ, ಮನೆಯೆಂದರೆ ದೇವರ ಮನೆ, ಮಲಗುವ ಕೋಣೆ, ಅಡುಗೆ ಮನೆ, ವರಾಂಡ, ಬಚ್ಚಲುಮನೆ ಇವೆಲ್ಲವೂ ಅನಿವಾರ್ಯ ಅಂದುಕೊಂಡು
ಕಟ್ಟುವ ನಾವು, ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಪುಸ್ತಕ ಸಂಗ್ರಹಿಸಿಡುವ ಗ್ರಂಥಾಲಯ ಅನಿವಾರ್ಯ ಎಂಬುದಾಗಿ ಯೋಚಿಸುವುದೇ ಇಲ್ಲ ಎಂದು ವಿಷಾಧಿಸಿದರು.ಪುಸ್ತಕ ಇಟ್ಟು ಗ್ರಂಥಾಲಯ ಸ್ಥಾಪಿಸುವುದು ಕೇವಲ ಸಾಹಿತಿ, ಕವಿ ಹಾಗೂ ವಿಮರ್ಶಕರುಗಳ ಮನೆಗೆ ಮಾತ್ರ ಸೀಮಿತವಾಗುತ್ತಿತ್ತು. ಈಗ ಅದು ಸಾರ್ವತ್ರಿಕಗೊಳ್ಳುವ ಅನಿವಾರ್ಯತೆಯಿದೆ. ಮೊಬೈಲ್ ದುಷ್ಪರಿಣಾಮವಾಗಿ ‘ಮೊಬೈಲ್ ಬಿಡಿ ಪುಸ್ತಕ ಹಿಡಿಯಿರಿ’ ಎಂಬ ಆಶಯಕ್ಕೆ ಕರ್ನಾಟಕ ಸರ್ಕಾರ ಒತ್ತು ನೀಡಿದೆ, ಪುಸ್ತಕ ಇದ್ದರಲ್ಲವೇ ಮೊಬೈಲ್ ಬಿಡುವುದು, ಹಾಗಾಗಿ ಮನೆಗೊಂದು ಗ್ರಂಥಾಲಯ ಎಂಬ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ. ಪಳನಿಸ್ವಾಮಿ ಅವರ ಮನೆಯಿಂದ ಈ ಕಾರ್ಯಕ್ರಮ ಪ್ರಾರಂಭಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿದ್ದಲ್ಲಿ ಪ್ರಾಧಿಕಾರದಿಂದ ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಗುವುದು, ಇಂದು ಮನೆಯನ್ನೆ ಗ್ರಂಥಾಲಯಗಳ ಭಂಡಾರ ಮಾಡಿಕೊಳ್ಳುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಂಕರಪುರ ಮಹದೇವು ಮಾತನಾಡಿ, ಪುಸ್ತಕ ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಐದು ಸಾವಿರ ಪುಸ್ತಕ ಹೊಂದಿದ್ದರು, ಅಷ್ಟೆಯಲ್ಲ ಅವುಗಳನ್ನು ಓದುತ್ತಿದ್ದರು. ಹಾಗಾಗಿಯೇ ಅವರ ಜ್ಞಾನ ಸಂವಿಧಾನ ಎಂಬ ದೊಡ್ಡಗ್ರಂಥ ಬರೆಯುವಲ್ಲಿ ಸಾಧ್ಯವಾಯಿತು. ಮಕ್ಕಳು ಪುಸ್ತಕ ಹಿಡಿಯುವ ಕಾಲಕ್ಕೆ ಮನೆ, ಸಮಾಜ ಶಾಂತಿ, ನೆಮ್ಮದಿ ಹೊಂದಲು ಸಾಧ್ಯ, ಮಕ್ಕಳಿಗೆ ಪುಸ್ತಕ ಹಿಡಿ ಎಂಬ ಸಂದೇಶ ನೀಡುವ ಪೋಷಕರು, ಹಿರಿಯರು ತಾವು ಸಹ ಪುಸ್ತಕ ಓದಬೇಕಿದೆ ಎಂದರು.
ಸಾಹಿತಿಗಳಾದ ಪ್ರೊ.ದೊಡ್ಡಲಿಂಗೇಗೌಡ, ನರಸಿಂಹಮೂರ್ತಿ, ಜನಪರ ಸಾಹಿತ್ಯ ಪರಿಷತ್ತಿನ
ರಾಜ್ಯಾಧ್ಯಕ್ಷ ಡಾ.ಎಂ.ಮಹೇಶ ಚಿಕ್ಕಲ್ಲೂರು, ಎಂ. ಗುರುಸ್ವಾಮಿ, ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಬಾಳಗುಣಸೆ ಮಂಜುನಾಥ್, ಮುಖ್ಯಶಿಕ್ಷಕ ಎನ್ ಲೋಕೇಶ್, ಕವಿ ಮದ್ದೂರು ದೊರೆಸ್ವಾಮಿ, ಬ್ರಹ್ಮಲಿಂಗಯ್ಯ, ಶಾಂತರಾಜ್, ಗೋಪಾಲ್ ಸ್ವಾಮಿ , ಬಸವರಾಜು, ಡಾ.ಪ್ರೇಮ , ಡಾ.ಕವಿತ, ಕುಸುಮ ಆಲ್ಕೆರೆ, ಸದಾನಂದ, ಮಾದೇಶ್, ಭಾಗ್ಯಗೌರೀಶ್, ಪ್ರೇಮ ಇನ್ನಿತರರಿದ್ದರು.