ಕನ್ನಡಪ್ರಭ ವಾರ್ತೆ ಉಡುಪಿ
ನಗರದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 33 ವರ್ಷಗಳ ಕಾಲ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಪ್ರಕಾಶ್ ರಾವ್ ಡಿ. ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಡಾ.ಟಿ.ಎಂ.ಎ.ಪೈ ಪ್ರತಿಷ್ಠಾನದ ಖಜಾ೦ಚಿ ಟಿ. ಸಚಿನ್ ಪೈ ಅವರು, ಕಾಲೇಜಿನ ಸೀಮಿತ ಮೂಲ ಸೌಕರ್ಯಗಳ ಹೊರತಾಗಿಯೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಡೆದಿರುವ ಪ್ರಶಸ್ತಿಗಳು, ಬಹುಮಾನಗಳು ಮತ್ತು ಸಾಧನೆಗಳ ಹಿಂದೆ ಪ್ರಕಾಶ್ ರಾವ್ ಅವರ ಪರಿಶ್ರಮ ಅಪಾರವಾದದು. ಇದು ಅವರು ವಿದ್ಯಾರ್ಥಿಗಳಿಗೆ ನೀಡಿರುವ ಪ್ರೋತ್ಸಾಹ ಮತ್ತು ಅವಿನಾಭಾವ ಸಂಬಂಧ ಎಂತಹದ್ದು ಎಂಬುದನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ಅತಿಥಿಗಳಾದ ರಾಷ್ಟ್ರೀಯ ವಾಲಿಬಾಲ್ ಆಟಗಾರ ಮೊಹಮ್ಮದ್ ಸಮೀರ್, ಉಡುಪಿಯ ಟ್ಯಾಲೆಂಟ್ ಆಕ್ಟಿವಿಜನ್ ತಜ್ಞೆ ಪ್ರತೀಕ್ಷಾ ಜಿ.ಎನ್., ಕಾಲೇಜಿನ ನಿರ್ದೇಶಕಿ ಪ್ರೊ. ನಿರ್ಮಲ ಕುಮಾರಿ ಕೆ. ಅವರು ನಿವೃತ್ತರಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಘುನಾಥ್ ಕೆ.ಎಸ್. ವಹಿಸಿದ್ದರು.ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ರಾವ್ ಅವರು ಕಾಲೇಜಿನಲ್ಲಿ ವೃತ್ತಿ ಸಲ್ಲಿಸಿ ಸೇವಾ ನಿವೃತ್ತಿ ಹೊಂದುವುದಕ್ಕೆ ಸಂಪೂರ್ಣ ತೃಪ್ತಿ ಇದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ದೈಹಿಕ ಚಟುವಟಿಕೆಗಳ ಜೊತೆ ಶಿಸ್ತು ಮತ್ತು ಧನಾತ್ಮಕ ಚಿಂತನೆಗಳನ್ನು ವಶಪಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕ್ರೀಡಾ ಕಾರ್ಯದರ್ಶಿಗಳಾದ ಆದಿತ್ಯ ಹಾಗೂ ಲಕ್ಷ್ಮೀಕಾಂತ ಹಾಜರಿದ್ದರು. ವಿದ್ಯಾರ್ಥಿಗಳಾದ ಎಲಿಟಾ ಸ್ವಾಗತಿಸಿದರು. ಅಜಿತ್ ಜೋಗಿ ಹಾಗೂ ಪಲ್ಲವಿ ಅತಿಥಿಗಳನ್ನು ಪರಿಚಯಿಸಿದರು. ಅಮೂಲ್ಯ ವಂದಿಸಿದರು. ಗಣೇಶ್ ನಿರೂಪಿಸಿದರು.