ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ತೋಳ್ಪಾಡಿತ್ತಾಯಗೆ ಅಭಿನಂದನಾ ಕಾರ್ಯಕ್ರಮ

KannadaprabhaNewsNetwork | Published : Nov 15, 2024 12:36 AM

ಸಾರಾಂಶ

ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ ತೋಳ್ಪಾಡಿತ್ತಾಯರ ಕಲಾ ಸೇವೆಯ ಗುಣಮಟ್ಟ ಅತ್ಯುತ್ತಮವಾದದ್ದು. ಅವರು ಸರ್ವಶ್ರೇಷ್ಠ ಕಲಾವಿದರ ಗರಡಿಯಲ್ಲಿ ಪಳಗಿದವರು ಎಂದು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳ ತೊಡಗಿಸಿಕೊಳ್ಳುವಿಕೆ, ಸೇವಾ ಕಾರ್ಯ ಮುಖ್ಯ ಪಾತ್ರವಹಿಸುತ್ತದೆ. ಸಂಸ್ಥೆಯಲ್ಲಿ ಉತ್ತಮ ಸಿಬ್ಬಂದಿಗಳಿದ್ದರೆ ಇಂತಹ ಪ್ರಶಸ್ತಿಗಳನ್ನು ಪಡೆಯಲು ಸಿಬ್ಬಂದಿಗಳ ಸೇವೆ ಸ್ಮರಣೀಯವೆನಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶಾಂತಿವನದ ಟ್ರಸ್ಟಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಬುಧವಾರ ಧರ್ಮಸ್ಥಳದ ಶಾಂತಿವನದಲ್ಲಿ ನಡೆದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಕ್ಷಗಾನ ಕ್ಷೇತ್ರದ ಸಾಧಕ,ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳಿಕ ಮನೋರಮಾ ತೋಳ್ಪಡಿತ್ತಾಯ ಮತ್ತು ಸೀತಾರಾಮ ತೋಳ್ಪಡಿತ್ತಾಯ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೀತಾರಾಮ ತೋಳ್ಪಾಡಿತ್ತಾಯ, ಪ್ರತಿಯೊಬ್ಬರ ಪ್ರತಿಭೆ ಹೊರ ಹೊಮ್ಮಲು ವೇದಿಕೆ ಅಗತ್ಯ. ನನಗೆ ಅಂತಹ ಅವಕಾಶ ಒದಗಿಸಿ ಕೊಟ್ಟವರು ವೀರೇಂದ್ರ ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್ ಹಾಗು ಕುಟುಂಬದವರು.ಕ್ಷೇತ್ರದ ಶಿಸ್ತು, ದಕ್ಷತೆ ನನ್ನ ಬೆಳವಣಿಗೆಗೆ ಕಾರಣವಾಗಿದೆ. ಚಿಕ್ಕಂದಿನಿಂದಲೇ ಚಂಡೆ ವಾದನ ಆರಂಭಿಸಿದೆ. ಪೋಷಕರ, ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನ, ಪ್ರೇರಣೆಯಿಂದ ಯಕ್ಷಗಾನ ಹಿಮ್ಮೇಳ ಕಲಿಕೆ ಮುಂದುವರಿಸಿದೆ ಎಂದರು.

ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ ತೋಳ್ಪಾಡಿತ್ತಾಯರ ಕಲಾ ಸೇವೆಯ ಗುಣಮಟ್ಟ ಅತ್ಯುತ್ತಮವಾದದ್ದು. ಅವರು ಸರ್ವಶ್ರೇಷ್ಠ ಕಲಾವಿದರ ಗರಡಿಯಲ್ಲಿ ಪಳಗಿದವರು ಎಂದು ಅಭಿನಂದಿಸಿದರು.

ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು.

ಕೃಷ್ಣ ಸಿಂಗ್, ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಜನಾರ್ದನ್, ಸಿರಿ ಸಂಸ್ಥೆಯ ಎಂಡಿ ಕೆ.ಎನ್. ಜನಾರ್ದನ್, ಮನೋರಮಾ ತೋಳ್ಪಾಡಿತ್ತಾಯ, ದೇವಸ್ಥಾನದ ಮಣೆಗಾರ್ ವಸಂತ ಮಂಜಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ.ಬಿಂದು ವಂದಿಸಿದರು. ಅನನ್ಯಾ ನಿರೂಪಿಸಿದರು. ಡಾ. ವೈಶಾಲಿ ಪರಿಚಯಿಸಿದರು. ಡಾ. ಸುಜಾತಾ ಸನ್ಮಾನ ಪತ್ರ ವಾಚಿಸಿದರು.

Share this article