ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿರುವುದು ಹಾಗೂ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರೊಂದಿಗೆ ಕೈಜೋಡಿಸಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಅವರು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂಥ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಿವೆ. ಪ್ರಧಾನಿಯವರ ನಿವಾಸದ ಎದುರು ಪ್ರತಿಭಟನೆ ನಡೆಸಿ ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ದೇಶ ಒಂದಾಗಿರುವುದು ಇವರಿಗೆ ಬೇಕಾಗಿಲ್ಲ. ವಿದೇಶದಿಂದ ಹಣ ಪಡೆದು ದೇಶದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ನೇರವಾಗಿ ಎದುರಿಸಲಾಗದೇ ಇರುವಂಥ ಹಲವಾರು ಟುಕ್ಡೆ ಗ್ಯಾಂಗ್‌ನವರು ಸೇರಿಕೊಂಡು ಕಾಕ್ರೋಚ್ ಪಾರ್ಟಿ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ರಾಜು ಕುರುಡಗಿ, ನಗರಸಭೆಯ ಸದಸ್ಯ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಅಶೋಕ ನವಲಗುಂದ, ಎಂ.ಎಂ. ಹಿರೇಮಠ, ವಿಜಯಕುಮಾರ ಗಡ್ಡಿ, ಜಯಶ್ರೀ ಉಗಲಾಟ, ಅರವಿಂದ ಹುಲ್ಲೂರ, ಶಿವರಾಜಗೌಡ ಹಿರೇಮನಿಪಾಟೀಲ, ಸೋಮು ಹುಡೇದಮನಿ, ವಿನಾಯಕ ಮಾನ್ವಿ, ಶಶಿಧರ ದಿಂಡೂರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.
ಪ್ರತಿಭಟನೆ ವೇಳೆ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಲು ಸಾಕಷ್ಟು ಪ್ರಯತ್ನ ಮಾಡಿದರೂ ಪೊಲೀಸರು ಅದನ್ನು ವಿಫಲಗೊಳಿಸಿದರು. ಕೊನೆಗೆ ಯುವ ಕಾರ್ಯಕರ್ತನೋರ್ವ ಸೈಕಲ್ ಟೈರ್‌ಅನ್ನು ಹಿಡಿದುಕೊಂಡು ಓಡೋಡಿ ಬಂದು ಪ್ರತಿಭಟನಾ ನಿರತರಿಗೆ ತಲುಪಿಸುತ್ತಿದ್ದಂತೆ ಅದಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಅದನ್ನು ಕೂಡಾ ಪೊಲೀಸರು ತಡೆದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ತುಳಿದು ಆಕ್ರೋಶ ವ್ಯಕ್ತಪಡಿಸಿದರು.