ದೇವರಾಜು ಕಪ್ಪಸೋಗೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಕಳೆದು ಬಾರಿ ಕಾಂಗ್ರೆಸ್‌ನಿಂದ ಕೈ ತಪ್ಪಿ ಹೋಗಿದ್ದ ತವರು ಚಾಮರಾಜನಗರ ಲೋಕಸಭಾ ಕ್ಷೇತ್ರ ಗೆಲ್ಲಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ಎಣೆಯುತ್ತಿದ್ದು, ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ಕೊಡಲೂ ಬಿಜೆಪಿ ಸಹ ಪ್ರತಿತಂತ್ರ ರೂಪಿಸುತ್ತಿದೆ. ಇದರಿಂದಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಏ 3 ರಂದೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿ ಮಾಡುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಿರುತ್ತಾರೆ. ಇತ್ತ ಬಿಜೆಪಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಲಿರುವ ಎಸ್. ಬಾಲರಾಜು ಪರವಾಗಿ ಭಾಗವಹಿಸಲಿದ್ದಾರೆ.
ಸಿಎಂ ರೋಡ್ ಶೋ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹ್ಯಾಲಿಕಾಪ್ಟರ್ ಮೂಲಕ ಚಾಮರಾಜನಗರಕ್ಕೆ ಆಗಮಿಸಿ ಮೊದಲಿಗೆ ಚಾಮರಾಜೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ,ರೋಡ್ ಶೋ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ಬಳಿಕ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಬಿಜೆಪಿ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸುವ ಮುಖಂಡರ ಪಟ್ಟಿಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೆಸರು ಇದ್ದು, ಈಗಾಗಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಶ್ರೀನಿವಾಸಪ್ರಸಾದ್ ಭಾಗವಹಿಸುವರೇ ಎಂಬ ಕುತೂಹಲ ಮೂಡಿದೆ.ಬಿಜೆಪಿ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಸಲು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಕೇಂದ್ರ ಸಚಿವ ಎ ನಾರಾಯಣಸ್ವಾಮಿ,ಮಾಜಿ ಮುಖ್ಯಮಂತ್ರಿ ಡಿ.ವಿ .ಸದಾನಂದಗೌಡ, ಮಾಜಿ ಸಚಿವ ಅರವಿಂದ ಲಿಂಬಾವಳಿ,ನಟಿ ಶೃತಿ ಸೇರಿ ಸ್ಥಳೀಯ ಮುಖಂಡರ ಭಾಗವಹಿಸಲಿದ್ದಾರೆ.
ಕುತೂಹಲ ಮೂಡಿಸಿರುವ ಪ್ರಸಾದ್ ನಡೆ: ಸಂಸದ ಶ್ರೀನಿವಾಸ್ ಪ್ರಸಾದ್ ಏ. 3ರಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸ್ತಾರಾ ಅಥವಾ ಇಲ್ಲವಾ ಅನ್ನೋ ಕುತೂಹಲ ಕ್ಷೇತ್ರದ ಜನರಲ್ಲಿ ಮೂಡಿದ್ದು, ಈಗಾಗಲೇ ಶ್ರೀನಿವಾಸ್ ಪ್ರಸಾದ್ ರನ್ನು ಭೇಟಿ ಮಾಡಿ ಕೈ ನಾಯಕರು ಚರ್ಚೆ ನಡೆಸಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಳಿಯ ಡಾ.ಎಸ್.ಎನ್. ಮೋಹನ್ ಕುಮಾರ್ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ತಂಗಿ ಪುತ್ರ ದೀರಜ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಟ್ಟಾ ಬೆಂಬಲಿಗ ಬಿಜೆಪಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಶ್ರೀನಿವಾಸ ಪ್ರಸಾದ್ ಮುಂದಿನ ರಾಜಕೀಯದ ನಿಲುವುಗಳ ಬಗ್ಗೆ ಸಂಶಯ ಹುಟ್ಟುಹಾಕಿದೆ.ಏ.3 ಕ್ಕೆ ನಾಮಪತ್ರ ಸಲ್ಲಿಸಲಿರುವ ಕೈ- ಕಮಲ ಅಭ್ಯರ್ಥಿಗಳು ಒಂದೇ ದಿನದಂದು ಗಡಿಜಿಲ್ಲೆಯಲ್ಲಿ ಕೈ-ಕಮಲ ವರಿಷ್ಠರ ಭರಾಟೆ ನಡೆಸಲಿದ್ದಾರೆ. ಇಬ್ಬರಿಂದಲೂ ಬಹಿರಂಗ ಸಮಾವೇಶ, ರೋಡ್ ಶೋ ನಡೆಯಲಿದ್ದು, ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.