ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಪರವಾಗಿ ಬಂದ ನ್ಯಾಯಾಲಯದ ತೀರ್ಪು, ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯನ್ನು ಬಯಲು ಮಾಡಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿ ಏಳು ಆರೋಪಿಗಳು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿರುವುದು ಹಿಂದೂ ರಾಷ್ಟ್ರಕ್ಕೆ ಸಿಕ್ಕ ಜಯವಾಗಿದೆ ಎಂದರು.
2006ರಲ್ಲಿ ಮಲೆಗಾಂವ್ ಸ್ಫೋಟ ನಡೆದಾಗ ಇಡೀ ದೇಶ ನಡುಗಿತ್ತು. ಸ್ಪೋಟದಲ್ಲಿ 6 ಜನ ಸತ್ತು ಹೋದರು. 100 ಜನ ಗಾಯಗೊಂಡರು. ಆಗ ರಾಷ್ಟ್ರೀಯ ತನಿಖಾ ದಳವು ಈ ಘಟನೆಗೆ ಸೆಮಿ(ಇಸ್ಲಾಮಿಕ್ ಸಂಘಟನೆ) ಕೈವಾಡ ಇದೆ ಎಂದು ಹೇಳಿತ್ತು. ಆದರೆ ಆಗ ಆಡಳಿತದಲ್ಲಿದ್ದ ಕೇಂದ್ರದ ಯುಪಿಎ ಸರ್ಕಾರವು ಎನ್‍ಐಎ ಹೇಳಿಕೆಯನ್ನು ತಿರುಚಿ ಸೆಮಿ ಸಂಘಟನೆಯನ್ನ ದೇಶ ಭಕ್ತ ಸಂಘಟನೆ ಎಂದು ಬಿಂಬಿಸಲು ಯತ್ನಿಸಿತು. ಕಾಂಗ್ರೆಸ್ ಸೆಮಿ ರಕ್ಷಣೆಗೆ ನಿಂತಿತ್ತು. ಅದೇ ವೇಳೆ ಈ ಘಟನೆಗೆ ಸಾಧ್ವಿ ಪ್ರಜ್ಞಾಸಿಂಗ್ ಅವರ ನೇತೃತ್ವದ ಅಭಿನವ ಭಾರತ ಸಂಘಟನೆಯನ್ನು ಎಳೆ ತಂದು, ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ 8 ಜನರು ಆರೋಪಿಗಳೆಂದು ಮಾಡಲಾಯಿತು ಎಂದು ಹೇಳಿದರು.ಸ್ಪೋಟದಲ್ಲಿ ನೂರುಲ್ ಕುದಾರನ್ನು ಬಂಧಿಸಲಾಗಿತ್ತು. ಶಬೀರ್ ಬ್ಯಾಟರಿವಾಲಾ ರೈಸ್ ಅಹಮದ್ ರನ್ನು ಹುಡುಕಲು ಆರಂಭಿಸಲಾಯಿತು. ಪೊಲೀಸರು ದಾಳಿಯಲ್ಲಿ ಮತ್ತೊಂದು ಮುಸ್ಲಿಂ ಸಂಘಟನೆಯ ಪಾಲ್ಗೊಳ್ಳುವಿಕೆ ಸಹ ಹೊರಬಿದ್ದಿತ್ತು. ಅವರೆಲ್ಲ ಮಾಡಿದ್ದನ್ನು ಬದಿಗೊತ್ತಿ ಪ್ರಜ್ಞಾ ಸಿಂಗ್ ಮತ್ತು ಅಭಿನವ ಭಾರತದ ಮೇಲೆ ಚಾರ್ಜ್ ಶೀಟ್ ಹಾಕಲಾಗಿತ್ತು. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಷಡ್ಯಂತ್ರವಾಗಿತ್ತು ಎಂದು ಕಿಡಿಕಾರಿದರು.
ಅಷ್ಟು ಮಾತ್ರವಲ್ಲದೆ, ಎನ್‍ಐಎ ಅಥವಾ ಎಟಿಎಸ್ ಹಿಂದೂ ಸಂಘಟನೆಗಳ ಭಾಗಿಯನ್ನ ತಳ್ಳಿಹಾಕಿದ್ದವು. ಬಜರಂಗದಳದ ಕಾರ್ಯಕರ್ತರು ಈ ದೇಶದಲ್ಲಿ ಯಾವುದೇ ಬಾಂಬ್ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ, ಮುಂದೆಯೂ ಭಾಗಿ ಆಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕಿದ್ದ ಹಿಂದೂ ಸಂಘನೆಗಳ ವಿರೋಧಿ ಧೋರಣೆಗೆ ಅಭಿನವ ಭಾರತದ ಮುಖಂಡರು ಬಲಿಯಾಗಬೇಕಾಯಿತು. ಈ ನಡುವೆ ರಾಷ್ಟ್ರೀಯ ತನಿಖಾ ದಳದಲ್ಲಿದ್ದ ಮೊಹಮೊದ್ ಮುಜಾವರ್ ಎನ್ನುವ ಅಧಿಕಾರಿ, ತಮ್ಮಮೇಲಿದ್ದ ಒತ್ತಡ ಬಯಲು ಮಾಡಿದ್ದಕ್ಕೆ ಮುಜಾವರ್ ಅವರನ್ನ ತನಿಖೆಯಿಂದ ಹಿಂದೆ ಸರಿಸಿ ಅವರಿಗೆ ಶಿಕ್ಷೆ ನೀಡಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಈಗ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಹಿಂದೂ ರಾಷ್ಟ್ರಕ್ಕೆ ಸಿಕ್ಕ ಜಯವಾಗಿದೆ ಎಂದರು.ಸೋನಿಯಾ ಮತ್ತು ರಾಹುಲ್ ಈ ದೇಶದ ಪ್ರಜೆನೇ ಅಲ್ಲ. ಇವರನ್ನು ಪ್ರಧಾನಿ ಮಾಡಲು ಹೊರಟಿದ್ರು, ಇವರೆಲ್ಲ ದೇಶದ ಕ್ಷಮೆಯಾಚಿಸಬೇಕು.
ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದ ಅಂಶಗಳನ್ನು ನೋಡಿದರೆ ಹಿಂದೂ ಸಮಾಜದ ಬಗ್ಗೆ ಹಾಳು ಮಾಡುವ ಯತ್ನವಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಅನೇಕ ಘಟನೆಗಳು ನಡೆದಿದೆ. ಪ್ರಜ್ಞಾ ಸಿಂಗ್ ಅವರ ಜೀವನವನ್ನೇ ಹಾಳು ಮಾಡುವ ಕರ್ನಲ್ ಅವರ ಜೀವನ ಹಾಳು ಮಾಡುವ ಯತ್ನ ನಡೆಸಲಾಗಿತ್ತು ಎಂದು ದೂರಿದರು.ಪ್ರಜ್ಞಾ ಸಿಂಗ್ ಪರ ಬಂದ ತೀರ್ಪು ಕಾಂಗ್ರೆಸ್ ನ ನೀತಿಯನ್ನ ಬಯಲು ಮಾಡಿದೆ. ಈ ತೀರ್ಪು ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಪ್ರಜ್ಞಾ ಸಿಂಗ್ ವೀಲ್ ಚೇರು ಹಿಡಿದಿರುವುದು ಕಾಂಗ್ರೆಸ್‍ನ ನೀತಿಯಿಂದಾಗಿದೆ. ತೀರ್ಪು ಪ್ರಜ್ಞಾರನ್ನ ಖುಲಾಸೆಗೊಳಿಸಿದೆ. ಜೀವನವನ್ನ ಹಾಳು ಮಾಡಿದ ಕಾಂಗ್ರೆಸ್‍ಗೆ ಶಿಕ್ಷೆ ಇಲ್ವಾ ಎಂದು ಪ್ರಶ್ನಿಸಿದರು.
ಷಡ್ಯಂತ್ರದ ಮೂಲಕ ಹಿಂದೂ ಭಯೋತ್ಪಾದನೆ ನಡೆಸಲಾಗುತ್ತಿದೆ ಎಂದು ಬಿಂಬಿಸಲು ಹೊರಟ ಕಾಂಗ್ರೆಸ್ ಬಗ್ಗೆ ಯಾರು ಕ್ರಮ ಜರುಗಿಸುತ್ತಾರೆ ಹಾಗಾಗಿ ಕಾಂಗ್ರೆಸ್ ಹಿಂದೂ ರಾಷ್ಟ್ರದ ಕ್ಷಮೆ ಕೇಳಬೇಕು ಎಂದ ಅವರು, ಕಾಂಗ್ರೆಸ್ ಹುಚ್ಚರ ಸಂತೆಯಂತಾಗಿದೆ. ಇದು ದೇಶವೇ ಅಲ್ಲ ಎಂದಿದ್ದ ಕಾಂಗ್ರೆಸ್‍ನವರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದರು.ಗೋಷ್ಟಿಯಲ್ಲಿ ಸೂಡಾ ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ನಗರ ಬಿಜೆಪಿ ಅಧ್ಯಕ್ಷ, ಡಿ. ಮೋಹನ್ ರೆಡ್ಡಿ, ಮಂಜುನಾಥ್ ನವುಲೆ, ದೀನ್ ದಯಾಳ್ ಇದ್ದರು.