ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣಕ್ಕೆ ಇನ್ನೆಷ್ಟು ಬಲಿ ಬೇಕು?: ಬಿ.ವೈ.ರಾಘವೇಂದ್ರ

KannadaprabhaNewsNetwork | Published : Apr 21, 2024 2:16 AM

ಸಾರಾಂಶ

ಕಾಂಗ್ರೆಸ್‌ನಿಂದ ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಪರಿಣಾಮ ಹಿಂದೂ ಯುವತಿ, ಯುವಕರು ಬಲಿ ಯಾಗುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹುಬ್ಬಳ್ಳಿಯ ನೇಹಾ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಹಾರಿಕೆ ಉತ್ತರ ನೀಡುತ್ತಿದ್ದು, ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣಕ್ಕೆ ಇನ್ನೆಷ್ಟು ಹಿಂದೂಗಳ ಬಲಿ ಬೇಕೋ ಗೊತ್ತಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿ ಪೋಷಣೆ ಮಾಡುತ್ತ ಬಂದಿದೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಪರಿಣಾಮ ಹಿಂದು ಯುವತಿ, ಯುವಕರು ಬಲಿಯಾಗುತ್ತಿದ್ದಾರೆ. ಕೊಲೆಯಾಗಿದ್ದು ಹಿಂದು ಯುವತಿ ನೇಹಾ, ರಕ್ಷಣೆ ನೀಡ ಬೇಕಾಗಿದ್ದು ನೇಹಾ ಕುಟುಂಬಕ್ಕೆ, ಆದರೆ ಇವರು ರಕ್ಷಣೆ ನೀಡಿದ್ದು ಮಾತ್ರ ಫಯಾಜ್ ಕುಟುಂಬಕ್ಕೆ ಇದೆಂತಹ ತುಷ್ಠೀಕರಣ. ಈ ಹಿಂದೆಯೂ ಕೂಡ ಅನೇಕ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಈ ಹಲ್ಲೆಗೆ ಕಾಂಗ್ರೆಸ್ಸ್ ಸರ್ಕಾರ ಕಾರಣವಾಗುತ್ತದೆ. ಈ ಸರ್ಕಾರದಲ್ಲಿ ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂದು ಒಂದು ಕೋಮಿನ ವರ್ಗ ನಿಶ್ಚಯಿಸಿದಂತಿದೆ ಎಂದು ಹರಿಹಾಯ್ದರು.

ಹರ್ಷ, ಪುಟ್ಟಪ್ಪ, ರಾಜು ಹೀಗೆ ಸಾಲು ಸಾಲಾಗಿ ಹಿಂದೂಗಳ ಹತ್ಯೆಯಾಗಿದೆ. ಹತ್ಯೆ ನಡೆದಾಗಲೆಲ್ಲ ಘಟನೆಯನ್ನು ಬೇಗ ದಾರಿ ತಪ್ಪಿಸುತ್ತಾರೆ. ನೇಹಳ ಕೊಲೆ ಯನ್ನು ಖಂಡಿಸಬೇಕಾದ ಗೃಹಸಚಿವರು ಮತ್ತು ಮುಖ್ಯಮಂತ್ರಿಗಳು ಇದು ವೈಯುಕ್ತಿಕ ಕಾರಣಕ್ಕಾಗಿ ಆದ ಕೊಲೆ ಲವ್ ಜಿಹಾದ್ ಅಲ್ಲ, ತನಿಖೆ ಮಾಡುತ್ತೇವೆ. ಈಗಾಗಲೇ ಆರೋಪಿಯನ್ನು ಬಂದಿಸಿದ್ದೇವೆ. ಶಿಕ್ಷೆಯನ್ನು ಕೊಡುತ್ತೇವೆ ಎಂದು ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂದು ಪ್ರತಿಭಟನೆ:

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಖಂಡಿಸಿ ಜಿಲ್ಲಾ ಜಿಜೆಪಿಯಿಂದಲೇ 21ರಂದು ಬೆಳಗ್ಗೆ 10.30ಕ್ಕೆ ಗೋಪಿವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂಗಳಿಗೆ ಉಳಿಗಾಲವೇ ಇಲ್ಲವಾಗಿದೆ. ಅದರ ಆಡಳಿತವೇ ಆಗಿದೆ. ಹಿಂದೂಗಳನ್ನು ಹತ್ಯೆ ಮಾಡಲೇ ಬೇಕು ಎಂಬಂತೆ ಘಟನೆಗಳು ನಡೆಯುತ್ತಿದೆ. ಜಾತ್ಯಾತೀತ ಎಂಬ ಪದಕ್ಕೆ ಅರ್ಥವೇ ಇಲ್ಲವಾಗಿದೆ. ಲವ್‍ ಜಿಹಾದ್ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೆ ಈ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬುತ್ತಿದೆ ಎಂದರು.

ನಮ್ಮ ಹೆಣ್ಣುಮಕ್ಕಳು ಕಾಲೇಜಿಗೆ ಹೋಗುವುದು ಕಷ್ಟವಾಗುತ್ತಿದೆ. ಎಷ್ಟು ಕಡೆ ಪೋಷಕರು ನಾವು ಕಾಲೇಜಿಗೆ ಕಳಿಸುವುದಿಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಈ ರಾಜ್ಯದಲ್ಲಿ ಕೆಫೆಗಳು ಸುರಕ್ಷಿತವಾಗಿಲ್ಲ. ಕಾಫಿ ಕುಡಿಯುವುದು ಕಷ್ಟವಾಗುತ್ತಿದೆ. ಶಿವಮೊಗ್ಗದಂತಹ ಪಟ್ಟಣದಲ್ಲಿ ಬಾಂಬ್ ತಯಾರಿಕೆ ಚಟುವಟಿಕೆಯೂ ನಡೆಯುತ್ತಿವೆ. ಶಿವಮೊಗ್ಗ ಜಿಲ್ಲೆ ನಕ್ಸಲರ ತಾಣವೂ ಆಗಿದೆ ಎಂದರು.

ಶಾಂತಿ ಸುವ್ಯವಸ್ಥೆ ಇದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಕೇವಲ 2 ತಿಂಗಳಲ್ಲಿ ರಾಜ್ಯದಲ್ಲಿ 13495 ವಿವಿಧ ಪ್ರಕರಣಗಳು ಇಲ್ಲಿ ನಡೆದಿದೆ. 2 ತಿಂಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಚೈನ್ ಕಳ್ಳತನ ಹೀಗೆ ವಿವಿಧ ರೀತಿಯ ಪ್ರಕರಣಗಳು ದಾಖಲಾಗಿದ್ದವೆ ಎಂದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಿ.ಎಸ್.ಅರುಣ್, ಎಂ.ಬಿ.ಭಾನುಪ್ರಕಾಶ್, ಎಸ್.ದತ್ತಾತ್ರಿ, ಜ್ಞಾನೇಶ್ವರ್, ಮಾಲತೇಶ್, ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್, ಹರಿಕೃಷ್ಣ, ರಾಜು ತಲ್ಲೂರು, ಶಿವಾಜಿ, ಶರತ್ ಕಲ್ಯಾಣಿ, ಕೆ.ವಿ. ಅಣ್ಣಪ್ಪ ಇದ್ದರು.

Share this article