ತುಮಕೂರು : ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಧರ್ಮದ ಹೆಸರಿನಲ್ಲಿ ಮೀಸಲಾತಿ ತರಲು ಹೊರಟಿದೆ ಎಂದು ಆಪಾದಿಸಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವೋಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿಕೊಂಡು ಬರುತ್ತಿದೆ.
ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಿರುವ ಸರ್ಕಾರ ಆಡಳಿತ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ. ಕೇವಲ ಚುನಾವಣೆಗಳನ್ನು ಗೆಲ್ಲುವ ದೃಷ್ಟಿ ಇಟ್ಟುಕೊಂಡು ಅಲ್ಪಸಂಖ್ಯಾತರ ತುಷ್ಟೀಕರಣ, ಗ್ಯಾರಂಟಿಗಳ ಹೆಸರಿನಲ್ಲಿ ಹಣ ನೀಡುತ್ತಿದೆ. ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.ಹಾಲು ಉತ್ಪಾದಕರಿಗೆ ಬಾಕಿ ಇರುವ ಸುಮಾರು 700 ಕೋಟಿ ರು. ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಎಲ್ಲಾ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಚುನಾವಣೆ ಗೆಲ್ಲುವ ತಂತ್ರ ಮಾಡುತ್ತಿದೆ. ಈಗ ಬಹಸಂಖ್ಯಾತ ಹಿಂದುಳಿದ ವರ್ಗದ ಮೀಸಲಾತಿ ಪ್ರಮಾಣವನ್ನು ಕಸಿದು ಅಲ್ಪಸಂಖ್ಯಾತ ಮುಸ್ಲೀಮರಿಗೆ ನೀಡುವ ಹುನ್ನಾರ ಮಾಡುತ್ತಿದೆ ಎಂದರು.
ಒಬಿಸಿ ಮೀಸಲಾತಿಯು ಆ ವರ್ಗಕ್ಕೆ ಸಾಂವಿಧಾನಿಕವಾಗಿ ದೊರಕಿರುವ ಹಕ್ಕು. ಈ ವರ್ಗಕ್ಕೆ ಅನ್ಯಾಯ ಮಾಡಿ ಮೀಸಲಾತಿ ಕಸಿಯುವ ಪ್ರಯತ್ನ ನಡೆಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಕಾಂಗ್ರೆಸ್ ಧೋರಣೆಯಿಂದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ನೂರಾರು ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ವೋಟಿನ ಓಲೈಕೆ, ತುಷ್ಟೀಕರಣ ಖಂಡನೀಯ. ಬಹುಸಂಖ್ಯಾತ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿ ಇವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ನೀಡಲು ಹೊರಟಿರುವುದನ್ನು ಬಿಜೆಪಿ ಸಹಿಸುವುದಿಲ್ಲ ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಕೆ. ವೇದಮೂರ್ತಿ ಮಾತನಾಡಿ, ಒಬಿಸಿ ವರ್ಗಕ್ಕೆ ಮೀಸಲಾದ ಮೀಸಲಾತಿಯನ್ನು ಧರ್ಮದ ಹೆಸರಿನಲ್ಲಿ ಮುಸ್ಲಿಮರಿಗೆ ಕೊಡಲು ಹೊರಟಿರುವ ಕಾಂಗ್ರೆಸ್ ಪಕ್ಷದ ಧೋರಣೆ ಖಂಡನೀಯ. ದೋಷಪೂರಿತ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಿರುವ ಕೊಲ್ಕತ್ತ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಆದರೆ ಕೋರ್ಟ್ ತೀರ್ಪು ಧಿಕ್ಕರಿಸಿ, ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಮಮತಾ ಬ್ಯಾನರ್ಜಿ ಧೋರಣೆಯನ್ನೇ ರಾಜ್ಯದಲ್ಲೂ ಅನುಸರಿಸಿ ಹಿಂದುಳಿದ ವರ್ಗದ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದುಳಿದ ವರ್ಗದವರು ಸಿಡಿದೇಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಬಾಬು, ಗಿರೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಬನಶಂಕರಿ ಬಾಬು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ನಗರ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ನಗರಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ್, ವಿಷ್ಣುವರ್ಧನ್, ಎಸ್.ಸಿ.ಮೋರ್ಚಾ ನಗರ ಅಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಜನಮೂರ್ತಿ, ಮುಖಂಡರಾದ ಮಹೇಶ್, ಹನುಮಂತಪುರ ಹನುಮಂತರಾಜು, ಸತ್ಯಮಂಗಲ ಜಗದೀಶ್, ಸಿದ್ದರಾಜುಗೌಡ, ಮಂಜೇಶ್‌ಗಾಂಧಿ, ಪ್ರೇಮಾ ಹೆಗಡೆ, ಜ್ಯೋತಿ ತಿಪ್ಪೇಸ್ವಾಮಿ, ಡಾ.ಫರ್ಜಾನ ಖಾನಂ, ಲತಾ, ಕೆ.ಶಂಕರ್, ಅಕ್ಷಯ್ ಚೌಧರಿ ಭಾಗವಹಿಸಿದ್ದರು.