ಕಾಂಗ್ರೆಸ್‌ನಿಂದ ದೇಶದಲ್ಲಿ ಅರಾಜಕತೆ ಸೃಷ್ಟಿ ಯತ್ನ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

KannadaprabhaNewsNetwork |  
Published : Nov 06, 2026, 01:45 AM IST
ಪೋಟೋ: 05ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪಾದಯಾತ್ರೆ ನಡೆಯಿತು. | Kannada Prabha

ಸಾರಾಂಶ

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ, ಗಾಂಧಿಬಜಾರ್ ಮೂಲಕ ಗೋಪಿವೃತ್ತ, ಜೈಲ್ ವೃತ್ತದ ಮೂಲಕ ಹಾದು ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್)ವರೆಗೆ ನಡೆಯಿತು. ಈ ಬೃಹತ್ ಪಾದಯಾತ್ರೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.

ನಂತರ ಅಲ್ಲಮಪ್ರಭು ಮೈದಾನಲ್ಲಿ ಆಯೋಜಿಸಿದ್ದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡುತ್ತಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ದೇಶದ ಒಳಗೆ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಚಾರ ನಡೆಸುತ್ತಿದೆ. ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ದೇಶದ ಜನರ ವಿಶ್ವಾಸ ಗಳಿಸಿದರೆ ಮಾತ್ರ ಪ್ರಧಾನಿ ಆಗಲು ಸಾಧ್ಯ. ಪ್ರಧಾನಿ ಸ್ಥಾನ ವಿದೇಶದಲ್ಲಿಲ್ಲ, ದೇಶದ ಜನರ ಮತ ಮತ್ತು ಅವರ ಹೃದಯದಲ್ಲಿದೆ ಎಂದು ಹೇಳಿದರು.

1952ರಿಂದ ದೇಶದಲ್ಲಿ ಹಲವು ಬಾರಿ ಎಸ್‌ಐಆರ್ ನಡೆದಿದ್ದು, ಅದರಲ್ಲಿ ಹೆಚ್ಚಿನ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ನಡೆದಿವೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದ ಪರಿಷ್ಕರಣೆಯನ್ನು ಮಾತ್ರ ವಿರೋಧಿಸುವುದು ಸರಿಯಲ್ಲ. ಕೇರಳದಲ್ಲಿ ಎಸ್‌ಐಆರ್ ಬಳಿಕ ಕಾಂಗ್ರೆಸ್ ಗೆದ್ದಿದೆ. ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆದರೆ ಕರ್ನಾಟಕದಲ್ಲಿ ಎಸ್‌ಐಆರ್ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ರಾಜಕೀಯ ಉದ್ದೇಶದಿಂದ ಎಂದು ಆರೋಪಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳಿಗೆ ಬಿಜೆಪಿ ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವುದರ ಜೊತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸುತ್ತೇವೆ. ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷಗಳು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿದರೂ ಜಾಗೃತ ಪ್ರಜೆಗಳು ಇರುವವರೆಗೆ ಅದು ಸಾಧ್ಯವಿಲ್ಲ ಎಂದರು.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ನಿಮ್ಮ ಆಡಳಿತದ ಅವಧಿ ಮುಗಿದಿದೆ ಎಂಬುದನ್ನು ತಿಳಿಸಬೇಕಿದೆ. ರಾಜ್ಯ ಸರ್ಕಾರ ಮನಬಂದಂತೆ ಬೆಲೆ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಗಳಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಂತಿಮ ಮೊಳೆ ಹೊಡೆಯಲಿದೆ ಎಂದರು.

ವಿಪ ಸದಸ್ಯ ಸಿ.ಟಿ ರವಿ ಮಾತನಾಡಿ, ಕಾಂಗ್ರೆಸ್‌ನವರು ಹತಾಶರಾಗಿ ಮೋದಿ ಟಾರ್ಗೆಟ್ ಮಾಡಿದರು. ಈಗ ಚುನಾವಣಾ ಆಯೋಗವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರ ಮುಲಾಜಿಗೆ ಮೋದಿ ಪ್ರಧಾನಿಯಾಗಿಲ್ಲ. ಜನರ ಅಭಿಲಾಶೆ ಅದೇ ಆಗಿತ್ತು ಎಂದರು.

ಈ ಹಿಂದೆ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 42. ಹೀಗಾಗಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಇರಲಿಲ್ಲ. ಈಗ ಎಸ್‌ಐಆರ್ ನೆಪದಲ್ಲಿ ಅರಾಜಕತೆ ಹುಟ್ಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಎಸ್‌ಐಆರ್‌ನಲ್ಲಿ ಅಕ್ರಮವಾಗಿದೆ ಎಂದಾದರೆ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಮತಪಟ್ಟಿ ಪರಿಷ್ಕರಣೆ ಮಾಡಿದ 58 ಸಾವಿರ ನೌಕರರ ಮೇಲೆ ಕೇಸು ಹಾಕಲಿ. ಪರಿಷ್ಕರಣೆ ಮಾಡಿದವರು ಕೇಂದ್ರ ಸರ್ಕಾರಿ ನೌಕರರಲ್ಲ ಎಂದು ಕುಟುಕಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪಾರ್ಲಿಮೆಂಟ್‌ನಲ್ಲಿ ಮಾತನಾಡಲು ಅವಕಾಶ ನೀಡಿದರೆ ಅಲ್ಲಿ ಮಾತನಾಡದೆ, ವಿದೇಶದಲ್ಲಿ ಮಾತನಾಡುತ್ತೀರಿ. ನೀವು ವಿದೇಶಿ ಸುಳಿಯಲ್ಲಿ ಸಿಕ್ಕಿದಿರಿ, ಮೋದಿಯಲ್ಲ. ಪಂಚ ಗ್ಯಾರಂಟಿ ಹೆಸರಿನಲ್ಲಿ ಚಕ್ಕಲಿ ಸುರಳಿ ತಿಂದಂತೆ ತಿಂದಿದ್ದೀರಿ. ದೀಪಾವಳಿ ಬಳಿಕ ವಿದ್ಯುತ್ ಬಿಲ್ ಕೂಡಜಾಸ್ತಿ ಮಾಡುತ್ತೀರಿ. ಇದು ನಿಮ್ಮ ಆರನೇ ಗ್ಯಾರಂಟಿಯಾಗಿದೆ. ಬೆಲೆಏರಿಕೆಯೇ ಇವರ ಅಜೆಂಡಾ ಆಗಿದೆ ಎಂದು ಟೀಕಿಸಿದರು

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಪ ಸದಸ್ಯಡಾ. ಧನಂಜಯ ಸರ್ಜಿ, ಪ್ರಮುಖರಾದ ಭಾರತಿ ಶೆಟ್ಟಿ, ಎನ್.ಕೆ. ಜಗದೀಶ್, ಅಶೋಕ್ ನಾಯ್ಕ್, ಬೆಳ್ಳಿ ಪ್ರಕಾಶ್, ಕುಮಾರಸ್ವಾಮಿ, ಡಿ. ಮೋಹನ್ ರೆಡ್ಡಿ, ಬಳ್ಳೇಕೆರೆ ಸಂತೋಷ್, ಹರಿಕೃಷ್ಣ, ಎಚ್.ಎನ್. ಮಂಜುನಾಥ್, ಯಶೋದಾ ವೈಷ್ಣವ್, ಎಸ್. ಜ್ಞಾನೇಶ್ವರ್, ಮಾಲತೇಶ್, ಶಿವರಾಜ್, ರಶ್ಮಿ ಶ್ರೀನಿವಾಸ್, ದೇವರಾಜ್ ಶೆಟ್ಟಿ, ಎನ್. ಮಂಜುನಾಥ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ