ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್‌ ಶುದ್ಧವಾಯ್ತು: ಸಚಿವ ಎಂ.ಬಿ.ಪಾಟೀಲ

KannadaprabhaNewsNetwork | Published : Jan 29, 2024 1:39 AM

ಸಾರಾಂಶ

ಅವಕಾಶವಾದಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್‌ ಶುದ್ಧವಾಯಿತು. ಹೋಗುವವರು ಹೋಗುತ್ತಾರೆ, ಬರುವವರು ಬರುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪಕ್ಷ ಬಿಟ್ಟು ಹೋಗುವವರನ್ನು ಕಾಲಕಾಲಕ್ಕೂ ನೋಡಿಕೊಂಡು ಬಂದಿದ್ದೇವೆ. ಅವಕಾಶವಾದಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಅವರು ಮಾಜಿ ಸಿಎಂ ಜಗದೀಶ ಶೆಟ್ಟರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್‌ ಶುದ್ಧವಾಯಿತು. ಹೋಗುವವರು ಹೋಗುತ್ತಾರೆ, ಬರುವವರು ಬರುತ್ತಾರೆ. ನಾವು ನಮ್ಮ ಸಿದ್ಧಾಂತವನ್ನು ಇಟ್ಟುಕೊಂಡು ಮುಂದುವರಿಯುತ್ತೇವೆ. ನಾವು ಇನ್ನಷ್ಟು ಬದ್ಧತೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಯತ್ನಾಳ್ ಕಾರ್ಖಾನೆ ಬಂದ್ ರಾಜಕೀಯಗೊಳಿಸುವುದು ಸರಿ ಅಲ್ಲ. ಕಾನೂನು ಪ್ರಕಾರವೇ ಎಲ್ಲ ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತವೆ. ಅದು ಯತ್ನಾಳ ಕಾರ್ಖಾನೆಯಾಗಿರಲಿ, ಎಂ.ಬಿ.ಪಾಟೀಲದ್ದಾಗಿರಲಿ, ಇನ್ಯಾರದ್ದೋ ಆಗಿರಲಿ. ಯಾವುದೇ ಸರ್ಕಾರವಿದ್ದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾದ ವಿಚಾರವಾಗಿ ಮಾತನಾಡಿದ ಅವರು, ಅದು ಸರಿ ಇಲ್ಲದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗಲಿ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ನಮ್ಮವರಲ್ಲ. ಇದರಲ್ಲಿ ಬಿಜೆಪಿಯರದ್ದು ಕೈವಾಡವಿದೆ ಎಂದು ಆರೋಪಿಸಿದರು.

ಬಿಜೆಪಿಯಿಂದ ಇನ್ನಷ್ಟು ಜನ ಕಾಂಗ್ರೆಸ್‌ಗೆ:

ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನ ಬರಲಿದ್ದಾರೆ. ಸಂದರ್ಭ ಬಂದಾಗ ಗೊತ್ತಾಗುತ್ತದೆ. ನಾನು ಈಗಲೇ ಏನು ಹೇಳುವುದಿಲ್ಲ. ರಾಜಕೀಯ ತೆರೆದ ಪುಸ್ತಕವಿದ್ದಂತೆ. ಬಂದವರಿಗೆ ನಾವು ಸ್ವಾಗತ ಮಾಡುತ್ತೇವೆ ಎಂದ ಅವರು, ಲೋಕಸಭೆಗೆ ಸ್ಥಳೀಯರೇ ಅಭ್ಯರ್ಥಿಗಳಿದ್ದಾರೆ. ಈ ಬಾರಿ ಕಾಂಗ್ರೆಸ್ ಟಿಕೆಟ್‌ ಅನ್ನು ಸ್ಥಳೀಯರಿಗೆ ನೀಡಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಪರ ಶ್ಯಾಮನೂರ ಮಾತನಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನೋಡಿ ಹಿರಿಯರಾಗಿ ಮಕ್ಕಳಿಗೆ ಆಶೀರ್ವದಿಸಿದ್ದಾರೆ. ಚುನಾವಣೆ ಬಂದಾಗ ಶ್ಯಾಮನೂರ ಅವರು ಕಾಂಗ್ರೆಸ್ ಪರವಾಗಿ ನಿಲ್ತಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಶ್ಯಾಮನೂರ ಅವರು ಪ್ರಚಾರ ಮಾಡುತ್ತಾರೆ. ನನ್ನ ಬಗ್ಗೆ ಕೂಡ ಯಡಿಯೂರಪ್ಪನವರು ಹೊಗಳಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಹೊಗಳುತ್ತಾರೆ ಎಂದರು.

ಬಿಜೆಪಿ ನಾಯಕರಿಗೆ ಸತೀಶ್ ಜಾರಕಿಹೊಳಿ ಭೇಟಿ ಎನ್ನುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಭೇಟಿ ಆಗಿಲ್ಲ. ಭೇಟಿ ಆಗಿದ್ರೆ ನನಗೆ ಗೊತ್ತಿರುತ್ತಿತ್ತು. ಸತೀಶ್ ನನಗೆ ಬಹಳ ಆತ್ಮೀಯರು ಎಂದರು.

Share this article