ಬಡವರ ಆರ್ಥಿಕ ಸಬಲತೆಗೆ ನಲ್ಲೂರು ಕುಟುಂಬದ ಕೊಡುಗೆ ಅಪಾರ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಡವರ ಆರ್ಥಿಕ ಸಬಲತೆಗೆ ನಲ್ಲೂರು ಕುಟುಂಬದ ಕೊಡುಗೆ ಅಪಾರ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ವರದಿಗಾರರ ಕೂಟದ ಬಳಿ ಸೋಮವಾರ ಬೆಳಿಗ್ಗೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಮಕ್ಷಮ ನಲ್ಲೂರು ಅರುಣಾಚಲ, ನಲ್ಲೂರು ರಾಘವೇಂದ್ರ, ಜಯಲಕ್ಷ್ಮಿ ರಾಘವೇಂದ್ರ ಕುಟುಂಬದಿಂದ ಮೋಕ್ಷ ವಾಹಿನಿಯನ್ನು ವೈಕುಂಠ ಟ್ರಸ್ಟ್‌ಗೆ ಹಸ್ತಾಂತರಿಸಿ ಮಾತನಾಡಿದರು.

ವೈಕುಂಠ ಟ್ರಸ್ಟ್‌ಗೆ ಏನು ಅಗತ್ಯವಿದೆಯೋ ಅದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ನಲ್ಲೂರು ರಾಘ‍ವೇಂದ್ರ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಶವ ಸಂಸ್ಕಾರಕ್ಕೆ ಅಗತ್ಯವಾದ ವ್ಯವಸ್ಥಿತ ಮೋಕ್ಷ ವಾಹಿನಿ ವಾಹನವನ್ನು ಹಸ್ತಾಂತರಿಸಿದ್ದಾರೆ. ಬಡವರು, ಕಡು ಬಡವರು, ಅಸಹಾಯಕರ ಕುಟುಂಬದ ಆರ್ಥಿಕ ಹೊರೆ ಇಳಿಸುವ ಕಳಕಳಿಯೂ ರಾಘವೇಂದ್ರ ಸೇವೆಯಲ್ಲಿ ಅಡಗಿದೆ ಎಂದು ಹೇಳಿದರು..

ಕೇವಲ ವೈಕುಂಠ ಟ್ರಸ್ಟ್‌ಗೆ ಸೀಮಿತವಾಗದೇ, ದಾವಣಗೆರೆ ಜಿಲ್ಲಾ ಕೇಂದ್ರದ ಸಾರ್ವಜನಿಕ ಹಿಂದೂ ರುದ್ರಭೂಮಿ, ಶಾಮನೂರು, ಕುಂದುವಾಡ ಸೇರಿದಂತೆ ಯಾರಿಗೆ ಅಗತ್ಯವಿರುತ್ತದೋ ಅಂತಹವರು ಟ್ರಸ್ಟ್‌ಗೆ ಸಂಪರ್ಕಿಸಿ, ಮೋಕ್ಷ ವಾಹಿನಿ ಸೇವೆ ಪಡೆಯಬಹುದು. ಮಿತ ಮಾತಿನ, ನಗು ಮೊಗದ ನಲ್ಲೂರು ರಾಘವೇಂದ್ರ ತಮ್ಮ ತಂದೆ, ತಾಯಿ, ಹಿರಿಯರಂತೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದರು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾವಣಗೆರೆ ಹಳೆ ಪಿಬಿ ರಸ್ತೆಯಲ್ಲಿ ವೈಕುಂಠ ಧಾಮ ಟ್ರಸ್ಟ್‌ಗೆ 3 ಎಕರೆ ಜಾಗ ದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಸೇವೆ ಸಮರ್ಪಿಸಿದ್ದಾರೆ. ಚಿನ್ನಾಭರಣ ಅಂಗಡಿಗಳಿಗೆ ಹೆಸರಾದ ನಲ್ಲೂರು ಕುಟುಂಬವು ಸದ್ದಿಲ್ಲದೇ ಸೇವೆಯಿಂದಲೂ ಇತರರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ವೈಕುಂಠ ಟ್ರಸ್ಟ್‌ಗೆ ಮೋಕ್ಷ ವಾಹಿನಿ ವಾಹನ ಸಮರ್ಪಿಸುವ ಕಾರ್ಯವನ್ನು ವರದಿಗಾರರ ಕೂಟದ ಬಳಿ ಸರಳವಾಗಿ ಹಮ್ಮಿಕೊಂಡಿದ್ದು ರಾಘವೇಂದ್ರ ಕಾಳಜಿಗೆ ಸಾಕ್ಷಿ. ಸುಮಾರು 15-16 ಲಕ್ಷ ರು. ವೆಚ್ಚದಲ್ಲಿ ವಾಹನವನ್ನು ಶವ ಸಾಗಿಸಲು, ಏಕಕಾಲಕ್ಕೆ 12 ಜನ ಕುಳಿತು ವೈಕುಂಠ ಧಾಮ, ರುದ್ರಭೂಮಿಗೆ ಹೋಗುವಂತೆ ಮಾರ್ಪಡಿಸಲಾಗಿದೆ ಎಂದು ತಿಳಿಸಿದರು.

ನಲ್ಲೂರು ಜ್ಯುಯಲರ್ಸ್ ಮಾಲೀಕ, ದಾನಿ ನಲ್ಲೂರು ಎಸ್.ರಾಘ‍ವೇಂದ್ರ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಶವ ಸಂಸ್ಕಾರಕ್ಕೆ ಇರುವ ಗಾಡಿಗಳು ಸುಮಾರು 15-20 ವರ್ಷದಷ್ಟು ಹಳೆಯವು. ಹಾಗಾಗಿ ವೈಕುಂಠ ಧಾಮ ಟ್ರಸ್ಟ್‌ಗೆ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಮೋಕ್ಷ ವಾಹಿನಿ ವಾಹನವನ್ನು ಅರ್ಪಿಸುತ್ತಿದ್ದೇವೆ. ವೈಕುಂಠ ಧಾಮವಷ್ಟೇ ಅಲ್ಲ, ಸಾರ್ವಜನಿಕ ರುದ್ರಭೂಮಿ, ಶಾಬನೂರು ರುದ್ರಭೂಮಿ, ಕುಂದುವಾಡ ರುದ್ರಭೂಮಿ ಹೀಗೆ ಜಿಲ್ಲಾ ಕೇಂದ್ರದ ಎಲ್ಲಾ ಜಾತಿ, ಸಮುದಾಯದವರೂ ಇದರ ಸೇವೆ ಪಡೆಯಬಹುದು ಎಂದರು.

ಇದೇ ವೇಳೆ ಉಭಯ ಶ್ರೀಗಳ ಸಮ್ಮುಖದಲ್ಲಿ ವೈಕುಂಠ ಟ್ರಸ್ಟ್ ಪದಾಧಿಕಾರಿಗಳಿಗೆ ನಲ್ಲೂರು ರಾಘವೇಂದ್ರ, ನಲ್ಲೂರು ಅರುಣಾಚಲ ಮೋಕ್ಷ ವಾಹನದ ಕೀ ಹಸ್ತಾಂತರಿಸಿದರು.

ಹಿರಿಯ ಚಿನ್ನಾಭರಣ ವರ್ತಕ ನಲ್ಲೂರು ಅರುಣಾಚಲ, ಪ್ರೇಮಾ ಅರುಣಾಚಲ, ಜಯಲಕ್ಷ್ಮಿ ರಾಘವೇಂದ್ರ ನಲ್ಲೂರು, ವೈಕುಂಠ ಟ್ರಸ್ಟ್‌ನ ಮೋತಿ ಪರಮೇಶ್ವರ, ಬಾಲಕೃಷ್ಣ ವೈದ್ಯ, ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಆರ್.ಎಸ್.ತಿಪ್ಪೇಸ್ವಾಮಿ, ಪಿ.ಎಸ್.ಲೋಕೇಶ್‌, ಸಂಜಯ್ ಕುಂದುವಾಡ, ರಾಜೇಶ, ಅಜಯ್‌, ಪುರುಷೋತ್ತಮ ಪಟೇಲ್‌, ನಾಯಕ, ರಾಕೇಶ್ ಬೆಹಲ್‌, ಸಿದ್ದರಾಮೇಶ್ವರ, ಹೇಮಾ, ರಾಘ‍ೇಂದ್ರ ಪುತ್ರಿ ಶ್ರೇಯಾ ಆರ್.ರೇವಣಕರ್, ಪುತ್ರ ಸಾಹಿಲ್‌.ಆರ್‌.ರೇವಣಕರ್ ಇತರರು ಇದ್ದರು.