ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ ಕಾಂಗ್ರೆಸ್‌: ಜೋಶಿ

KannadaprabhaNewsNetwork |  
Published : May 29, 2024, 12:50 AM IST
13232 | Kannada Prabha

ಸಾರಾಂಶ

ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಎಂಬುವವರು 187 ಕೋಟಿ ಅವ್ಯವಹಾರ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ ನೋಟ್‌ನಲ್ಲಿ ಮಂತ್ರಿ ಹಾಗೂ ಅಧಿಕಾರಿಗಳ ಹೆಸರು ನಮೂದಿಸಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ಗ್ಯಾರಂಟಿ ಸರ್ಕಾರ ರಚನೆ ಮಾಡಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆಯೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಎಂಬುವವರು ₹187 ಕೋಟಿ ಅವ್ಯವಹಾರ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ ನೋಟ್‌ನಲ್ಲಿ ಮಂತ್ರಿ ಹಾಗೂ ಅಧಿಕಾರಿಗಳ ಹೆಸರು ನಮೂದಿಸಿದ್ದಾರೆ. ಲೂಟಿ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಸಂಬಂಧಪಟ್ಟ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ಪ್ರಕರಣದಿಂದಾಗಿ ಪರಿಶಿಷ್ಟ ಸಮುದಾಯಕ್ಕೆ ಬಳಕೆಯಾಗಬೇಕಿದ್ದ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಪ್ರಭಾವಿಗಳು ಕೈಯಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಅಕ್ರಮಕ್ಕೆ ನಾನು ಹೊಣೆಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಂದ್ರಶೇಖರನ್ ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದರೆ ಸಿದ್ದರಾಮಯ್ಯ ಸರ್ಕಾರದ ಸಚಿವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಿದ್ದ ₹ 187 ಕೋಟಿ ಸಚಿವರು, ನಿಗಮದ ಎಂ.ಡಿ. ಮತ್ತು ಅಧಿಕಾರಿಗಳು ನಕಲಿ ಖಾತೆ ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗ್ಯಾರಂಟಿ ಎಂಬ ನಾಟಕದೊಂದಿಗೆ ಕಳೆದ ಒಂದು ವರ್ಷದಿಂದ ಕರ್ನಾಟಕವನ್ನು ಲೂಟಿ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಜೀವ ಬಲಿ ಪಡೆಯಲು ಆರಂಭಿಸಿದೆ. ಇದೇ ಕಾಂಗ್ರೆಸ್‌ ಸರ್ಕಾರದ ಸಾಧನೆ. ಹಗರಣದ ರೂವಾರಿ ಸಚಿವ ಬಿ. ನಾಗೇಂದ್ರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ತಮ್ಮ ಆಪ್ತರ ರಕ್ಷಿಸುವ ಬದಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ