ನನ್ನ ರಾಜೀನಾಮೆ ಬಳಿಕ ಕ್ಷೇತ್ರಕ್ಕೆ ಕಾಂಗ್ರೆಸ್ ದಂಡು: ಎಚ್ಡಿಕೆ

KannadaprabhaNewsNetwork | Published : Oct 11, 2024 11:47 PM

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‌ನವರ ದಂಡು ಪ್ರತಿನಿತ್ಯ ಕ್ಷೇತ್ರಕ್ಕೆ ಬರುತ್ತಿದ್ದು, ನಿತ್ಯ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಎಲ್ಲರಿಗೂ ನಿವೇಶನ ನೀಡುತ್ತೇವೆ ಎಂದು ಓಡಾಡುತ್ತಿದ್ದಾರೆ. ಆದರೆ, ಯಾರಿಗಾದರೂ ನಿವೇಶನ ನೀಡಿದ್ದಾರಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‌ನವರ ದಂಡು ಪ್ರತಿನಿತ್ಯ ಕ್ಷೇತ್ರಕ್ಕೆ ಬರುತ್ತಿದ್ದು, ನಿತ್ಯ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಎಲ್ಲರಿಗೂ ನಿವೇಶನ ನೀಡುತ್ತೇವೆ ಎಂದು ಓಡಾಡುತ್ತಿದ್ದಾರೆ. ಆದರೆ, ಯಾರಿಗಾದರೂ ನಿವೇಶನ ನೀಡಿದ್ದಾರಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದ ಶ್ರೀ ಕೊಲ್ಲಾಪುರದಮ್ಮನ ದೇವನಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೋ ಗೋಮಾಳದಲ್ಲಿ ಜೆಸಿಬಿ ತಂದು ಮಟ್ಟ ಮಾಡಿ ಸೈಟ್ ಕೊಡುತ್ತೇವೆ ಅಂತಿದ್ದಾರೆ. ಜೆಸಿಬಿ ತೆಗೆದುಕೊಂಡು ಹೋಗಿ ನಾಟಕ ಮಾಡುತ್ತಿದ್ದಾರೆ. ಚುನಾವಣೆ ಒಳಗೆ ಒಂದೇ ಒಂದು ಸೈಟ್ ಕೊಡಲಿ ನೋಡೋಣ ಆಗ ಚರ್ಚಿಸುತ್ತೇನೆ ಎಂದರು.

೩ ತಿಂಗಳಲ್ಲಿ ಏನು ಮಾಡಿದ್ದಾರೆ?: ಚನ್ನಪಟ್ಟಣದಲ್ಲಿ ಎಲೆಕೆರೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಎಷ್ಟು ವರ್ಷದಿಂದ ಆಗದೇ ನಿಂತಿದೆ. ಅದನ್ನ ಸರಿಪಡಿಸಲು ಮುಂದಾಗಿದ್ದು ನಾನು. ೩ ತಿಂಗಳಲ್ಲಿ ೨೦ ಬಾರಿ ಚನ್ನಪಟ್ಟಣಕ್ಕೆ ಬಂದಿದ್ದೀನಿ. ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಒಮ್ಮೆಯೂ ಬರಲಿಲ್ಲ ಎಂದು ಆರೋಪಿಸುತ್ತಾರಲ್ಲ, ಇವರು ೩ ತಿಂಗಳಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರರು.

ಯುಜಿಡಿಗೆ ೯೬ಕೋಟಿ ಅನುದಾನ:

ನಗರದ ಯುಜಿಡಿಗೆ ೯೬ಕೋಟಿ ಅನುದಾನ ಕೊಟ್ಟಿದ್ದು ನಾನು. ಇಲ್ಲಿ ಕೆಲಸ ಆಗಬೇಕು ಅಂದರೆ ಟೆಂಡರ್ ಪಡೆದವರನ್ನು ಅಧಿಕಾರಿಗಳು ಅಣ್ಣತಮ್ಮಂದಿರನ್ನು ಹೋಗಿ ನೋಡಿ ಬನ್ನಿ ಅಂತಾರಂತೆ. ಯಾಕೆ, ಕಮಿಷನ್ ಗೆ ಅವರನ್ನ ಭೇಟಿ ಮಾಡಬೇಕಾ.? ನಗರ ಪ್ರದೇಶಕ್ಕೆ ನಾನು ಎಷ್ಟು ಹಣ ಕೊಟ್ಟಿದ್ದೇನೆ ಗಮನಿಸಿ. ಬಹಳ ಮೋಸ ಮಾಡಿ, ನಿಮ್ಮ ಮುಂದೆ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಮನಗರದಲ್ಲಿ ಮೂರು ಸಾವಿರ ಐದು ಸಾವಿರ ಸೈಟ್ ಅನ್ನುತ್ತಾರೆ. ಆದರೆ, ಒಂದುವರೆ ವರ್ಷದಿಂದ ಅವರ ಯೋಗ್ಯತೆಗೆ ಇವತ್ತಿನವರೆಗೆ ಒಂದು ಸೈಟ್ ಕೊಡಲು ಆಗಿಲ್ಲ. ನನ್ನ ಅವಧಿಯಲ್ಲಿ ಮನೆ ನಿರ್ಮಾಣಕ್ಕೆ ನೀಡಿದ್ದ ೫೦ ಕೋಟಿ ಹಣ ಏನು ಮಾಡಿದರೋ ಗೊತ್ತಿಲ್ಲ. ನನ್ನನ್ನ ಕೇವಲ ೧೪ ತಿಂಗಳಿನಲ್ಲಿ ಕೆಳಗಡೆ ಇಳಿಸಿದರು. ಈಗ ಬಂದು ನನ್ನ ವಿರುದ್ಧ ಮಾತನಾಡ್ತಾರೆ. ಎಲ್ಲಿ ನೋಡಿದರೂ ಅಣ್ಣತಮ್ಮಂದಿರು, ಕಾಂಗ್ರೆಸ್‌ನವರ ವಿನೈಲ್ ಬೋರ್ಡ್‌ಗಳು ಕಾಣುತ್ತವೆ ಎಂದು ಡಿ.ಕೆ.ಸಹೋದರರರ ವಿರುದ್ಧ ಕಿಡಿಕಾರಿದರು.

ನಾನು ಬೋರ್ಡ್ ಹಾಕಿಸಲಿಲ್ಲ:

ನಾನು ಚನ್ನಪಟ್ಟಣಕ್ಕೆ ಒಂದುವರೆ ಸಾವಿರ ಕೋಟಿ ಅನುದಾನ ತಂದರು ಎಲ್ಲಿಯೂ ಬೋರ್ಡ್ ಹಾಕಿಸಿಕೊಳ್ಳಲು ಹೋಗಿಲ್ಲ. ನಿಮ್ಮ ಹೃದಯದಲ್ಲಿ ಸ್ಥಾನ ಪಡೆಯಬೇಕು ಎಂದು ಬಯಸಿದವನು ನಾನು. ದಯವಿಟ್ಟು ಯಾರು ಇವರ ಮಾತುಗಳನ್ನು ನಂಬಬೇಡಿ. ಬಹಳ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇವರ ಮೂರು ತಿಂಗಳಿನಿಂದ ಕೆಲಸ ಮಾಡಿದ್ದರೆ ಇಂದು ನನಗೆ ಏಕೆ ಅರ್ಜಿ ಸಲ್ಲಿಸುತ್ತಿದ್ದರು ಎಂದು ಪ್ರಶ್ನಿಸಿದರು.

ಜನ ಉತ್ತರ ನೀಡಿದರು:

ರಾಜ್ಯದಲ್ಲಿ ಜೆಡಿಎಸ್ ಮುಗಿದೇ ಹೊಯ್ತು ಅಂದರು. ಅದಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ದೆಹಲಿ ಮಟ್ಟದಲ್ಲಿ ಕುಮಾರಸ್ವಾಮಿಯನ್ನ ಗುರುತಿಸಿದ್ದಾರೆ ಅಂದ್ರೆ ಅದು ನಿಮ್ಮಿಂದ. ನನ್ನ ರಾಜಕೀಯ ಇಲ್ಲಿಗೆ ಮುಗಿಯೊಲ್ಲ.ರಾಜ್ಯದಲ್ಲಿ ಬಡ ಕುಟುಂಬಗಳ ಅಭಿವೃದ್ಧಿಗೆ ನನ್ನದೇ ಆದ ಯೋಜನೆ ಇದೆ. ನನಗೆ ಸಿಕ್ಕ ಕೆಲವೇ ವರ್ಷಗಳ ಅಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.

ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ಗಲಾಟೆ ನಡೆದ ಸಂದರ್ಭದಲ್ಲಿ ನಾನು ಎರಡು ಸಮುದಾಯದವರ ಅಂಗಡಿಗಳಿಗೆ ಭೇಟಿ ನೀಡಿದೆ. ಎರಡು ಸಮುದಾಯವರಿಗೂ ನನ್ನ ಕೈಯಿಂದ ಪರಿಹಾರ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗಾದರೂ ಪರಿಹಾರ ನೀಡಿದ್ದಾರಾ. ಇದನ್ನು ಚನ್ನಪಟ್ಟಣದ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸರ್ಕಾರ ನಂಬಬೇಡಿ:

ಈ ಸರ್ಕಾರ ಬಂದು ನಂತರ ಬರೀ ಬೊಗಳೇ ಬಿಡುತ್ತಿದೆ. ಚನ್ನಪಟ್ಟಣದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಆದರೆ, ತಮಿಳುನಾಡಿಗೆ ನೀರು ಬಿಟ್ಟರು. ಸಮುದ್ರಕ್ಕೆ ಹರಿಸಿದರು. ಇವರು ಮಾಡಿರೋ ಘನಂದಾರಿ ಕೆಲಸಗಳನ್ನೇ ಹೇಳ್ತಿದ್ದೇನೆ. ಹಿಂಗಾರು ಮಳೆ ಬರದೇ ಇದ್ದಿದ್ರೆ ರೈತರ ಪರಿಸ್ಥಿತಿ ಏನಾಗುತ್ತಿತ್ತು. ಈ ಸರ್ಕಾರವನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದರು.

ಈ ಕ್ಷೇತ್ರದಲ್ಲಿ ಪ್ರತಿ ಮನೆ ಮನೆಗೂ ಬರಬೇಕೆಂದು ತೀರ್ಮಾನ ಮಾಡಿದ್ದೇನೆ. ಹಗಲು ದರೋಡೆಕೋರರನ್ನು ನಂಬಬೇಡಿ, ಇವರಿಗೆ ಮತ ನೀಡಬೇಡಿ. ಮತ್ತಿಕೆರೆಯಲ್ಲಿ ಪ್ರತಿನಿತ್ಯ ಲೋಡ್‌ಗಟ್ಟಲೇ ಕಲ್ಲು ಬರುತ್ತೆ. ಇದೆ ಅವರ ಕೆಲಸ. ಹಿಂದಿನ ಚುನಾವಣೆ ಏನೇ ಇರಲಿ ಈ ಬಾರಿ ನೀವು ಕೊಡೊ ಶಕ್ತಿ, ರಾಜ್ಯಕ್ಕೆ ದೇಶದಲ್ಲಿ ನನಗೆ ಕೆಲಸ ಮಾಡಲು ಶಕ್ತಿ ಬರುತ್ತೆ ಎಂದರು.

ನನ್ನ ಆರೋಗ್ಯ ಕೂಡ ಲೆಕ್ಕಿಸದೇ ದೇಶದಲ್ಲಿ ಕೆಲಸ ಮಾಡುತ್ತಾ ಇದ್ದೇನೆ. ಬಡವರ ಪರವಾಗಿ ನನ್ನ ಶ್ರಮ ಹಾಕುತ್ತಾ ಇದ್ದೇನೆ. ಗೃಹಲಕ್ಷ್ಮೀ ಇನ್ನೂ ಎರಡು ತಿಂಗಳು ಕೊಡಬಹುದು ಅಷ್ಟೇ. ಈ ಚುನಾವಣೆಯಲ್ಲಿ ಇವರನ್ನು ಮನೆಗೆ ಕಳುಹಿಸಿದ್ರೆ

ಪರ್ಮನೆಂಟ್ ಆಗಿ ಮನೆಗೆ ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರಾಧ್ಯಕ್ಷ ಅಜಯ್, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಮುಖಂಡ ಪ್ರಸನ್ನ ಪಿ.ಗೌಡ ಇತರರಿದ್ದರು.

ಬಾಕ್ಸ್..................

ಈ ಚುನಾವಣೆ ನಾನು ನಡೆಸುತ್ತೇನೆ: ಎಚ್‌ಡಿಕೆ

ಚನ್ನಪಟ್ಟಣದಲ್ಲಿ ಇದುವರೆಗೆ ನನ್ನ ಚುನಾವಣೆಯನ್ನು ನೀವು ನಡೆಸಿದ್ದೀರಾ. ಈ ಬಾರಿ ಚುನಾವಣೆಯಲ್ಲಿ ನಿಮಗಾಗಿ ನಾನು ನಡೆಸುತ್ತೇನೆ ಎಂದು ಕುಮಾರಸ್ವಾಮಿ ಘೋಷಿಸಿದರು.

ಎರಡು ಬಾರಿ ಪ್ರಚಾರಕ್ಕೆ ನಾನು ಬಾರದೆ ಇದ್ದರೂ ನನ್ನ ಪರವಾಗಿ ನೀವೇ ನಿಂತು ಚುನಾವಣೆ ನಡೆಸಿದ್ದೀರಾ. ಚನ್ನಪಟ್ಟಣದಲ್ಲಿ ಈ ಚುನಾವಣೆಯಲ್ಲಿ ನನಗೆ ನೀಡುವ ಮತ ಏನಿದೆ ಅದನ್ನು ರಾಷ್ಟ್ರ ಮಟ್ಟದಲ್ಲಿ ನೋಡುತ್ತಾರೆ. ನಿಮ್ಮ ಮಗ, ಅಣ್ಣ ಎಂದು ತಿಳಿದುಕೊಳ್ಳಿ. ಇವತ್ತು ನೀವು ನೀಡಿದ ಶಕ್ತಿಯಿಂದ ನಾನು ಈ ಹಂತದಲ್ಲಿದ್ದೇನೆ. ನನ್ನ ರಾಜಕೀಯ ಇಲ್ಲಿಗೆ ಮುಗಿಯುವುದಿಲ್ಲ ಎಂದರು.

ಪೊಟೋ೧೦ಸಿಪಿಟಿ೧:

ಚನ್ನಪಟ್ಟಣದ ಕೊಲ್ಲಾಪುರದಮ್ಮನ ದೇವಸ್ಥಾನ ಆವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಕುಮಾರಸ್ವಾಮಿ ಉದ್ಘಾಟಿಸಿದರು.

Share this article