ಗಾಂಧಿಬಜಾರ್ ಫುಟ್‌ಪಾತ್ ವ್ಯಾಪಾರ ತೆರವಿಗೆ ಆಗ್ರಹ

KannadaprabhaNewsNetwork | Published : Oct 11, 2024 11:47 PM

ಸಾರಾಂಶ

ಶಿವಪ್ಪನಾಯಕ ವೃತ್ತದಿಂದ ರಾಮಣ್ಣ ಶ್ರೇಷ್ಟಿ ಪಾರ್ಕ್ ವರೆಗೆ ಎರಡು ಬದಿಯಲ್ಲಿ ಫುಟ್‌ಪಾತ್ ವ್ಯಾಪಾರಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವುದು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗಾಂಧಿ ಬಜಾರ್ ವರ್ತಕರಿಗೆ ಫುಟ್‌ಪಾತ್ ವ್ಯಾಪಾರದಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಎರಡು ಕಡೆಗಳಲ್ಲಿ ಫುಟ್‌ಪಾತ್ ವ್ಯಾಪಾರ ತೆರವುಗೊಳಿಸುವಂತೆ ಆಗ್ರಹಿಸಿ ಗಾಂಧಿ ಬಜಾರ್ ವರ್ತಕರ ಸಂಘ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಪುಟ್‌ಪಾತ್ ವ್ಯಾಪಾರಿಗಳು, ತಳ್ಳುವ ಗಾಡಿಗಳು ಮತ್ತು ಫ್ಲೆಕ್ಸ್‌ಗಳಿಂದ ತೆರಿಗೆ ಕಟ್ಟುತ್ತಿರುವ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದು, ಗಾಂಧಿ ಬಜಾರಿನ ಎರಡು ಕಡೆ ಫುಟ್‌ಪಾತ್ ಗಳಲ್ಲಿ ವ್ಯಾಪಾರಿಗಳು, ರಸ್ತೆಯ ಮೇಲೆ ತಳ್ಳುವ ಗಾಡಿ ಹಾವಳಿ ಹೆಚ್ಚಾಗಿದೆ. ಗ್ರಾಹಕರು ಅಂಗಡಿ ಒಳಗೆ ಬರಲು ಅಡ್ಡಿಯಾಗುತ್ತಿದೆ. ರಸ್ತೆ ಮೇಲೆ ದ್ವಿಚಕ್ರ ವಾಹನ ಚಲಿಸುವುದು ದುಸ್ತರವಾಗಿದೆ. ಪಾದಚಾರಿಗಳು ಪುಟ್ ಪಾತ್ ಬಿಟ್ಟು ರಸ್ತೆಯಲ್ಲಿ ಓಡಾಡುವಂತಾಗಿದೆ ಎಂದು ತಿಳಿಸಿದರು.

5 ವರ್ಷಗಳ ಹಿಂದೆ ಗಾಂಧಿ ಬಜಾರ್‌ನಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ಹಲವು ವರ್ಷಗಳಿಂದ ವ್ಯಾಪಾರ ಇಳಿಮುಖವಾಗಿದೆ. ಒಂದು ಕಡೆ ಮಳಿಗೆ ಅಡ್ವಾನ್ಸ್ ಹೆಚ್ಚಾಗಿದ್ದು, ನಮಗೆ ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಫುಟ್‌ಪಾತ್ ವ್ಯಾಪಾರಿಗಳು ಹಾಗೂ ತಳ್ಳುವ ಗಾಡಿಯವರಿಂದ ತೊಂದರೆಗಳು ಹೆಚ್ಚಾಗಿದೆ. ಅಂಗಡಿಗೆ ಬರುವ ಗ್ರಾಹಕರು ಫುಟಪಾತ್ ವ್ಯಾಪಾರಿಗಳನ್ನು ದಾಟಿ ಅಂಗಡಿಯ ಒಳಗೆ ಬರುವುದು ಕಷ್ಟವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದಶಕಗಳಿಂದ ಮನವಿ ಸಲ್ಲಿಸಿದರೂ ಪರಿಹಾರ ಸಿಗುತ್ತಿಲ್ಲ. ಶಾಶ್ವತ ಪರಿಹಾರ ಒದಗಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಜೆ.ದಿನಕರ್, ಕಾರ್ಯದರ್ಶಿ ರಾಕೇಶ್ ಸಾಕ್ರೆ, ಉಪಾಧ್ಯಕ್ಷ ಡಿ.ಪಿ.ಹರೀಶ್, ಖಜಾಂಚಿ ಡಾ.ಭರತ್, ನಿರ್ದೇಶಕರಾದ ನಟರಾಜ್ ನವಲೆ, ನವೀನ್ ಸಾಕ್ರೆ, ಹಿತೇಂದರ್ ಜೈನ್, ವಿಠ್ಠಲ್ ಹೆಬ್ಬಾರೆ, ನಂದನ್ ನವಲೆ, ಪದಾಧಿಕಾರಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಪದಾಧಿಕಾರಿಗಳು, ವರ್ತಕರು ಉಪಸ್ಥಿತರಿದ್ದರು.

Share this article