ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಬೆಲೆ ಏರಿಕೆಯಿಂದ ಬಳಲುತ್ತಿರುವ ಜನತೆಗೆ ನಿರ್ದಿಷ್ಟವಾದ ಜೀವನ ನಡೆಸಲು ಕಷ್ಟವಾಗಿದೆ. ಮಕ್ಕಳ ಉತ್ತಮ ಭವಿಷ್ಯ ಮತ್ತು ದೇಶದ ಆರ್ಥಿಕ ಪ್ರಗತಿ ದೃಷ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಗಳಿಂದ ಮಧ್ಯಮ ವರ್ಗದ ಜನತೆಗೆ ಸಮಾಜದಲ್ಲಿ ಬಾಳುವುದೇ ದುಸ್ತರವಾಗಿದ್ದು ದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದರೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯ ಎಂದರು.ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಸವಣ್ಣ ಮತ್ತು ಅಂಬೇಡ್ಕರ್ ಆಶಯಗಳಿಗೆ ಕೊಡಲಿ ಪೆಟ್ಟು ಹಾಕುತ್ತಿದೆ. ದೇಶದ ಸಂವಿಧಾನ ಬದಲಿಸಲು ಮುಂದಾಗಿರುವ ಸರ್ಕಾರಕ್ಕೆ ಜನತೆ ಮಾರು ಹೋಗಬಾರದು. ಕಾಂಗ್ರೆಸ್ ಸಂವಿಧಾನ ಹಾಗೂ ಅಂಬೇಡ್ಕರ್ ಸಿದ್ಧಾಂತಗಳಿಗೆ ಪೂರಕವಾಗಿದೆ. ಸಮಸಮಾಜ ನಿರ್ಮಿಸುವ ಗುರಿ ಹೊಂದಿರುವ ಕಾಂಗ್ರೆಸ್ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಮಾದರಿಯಲ್ಲೇ ದೇಶದಲ್ಲಿ ಮಹಿಳಾ, ಯುವ, ರೈತ, ಶ್ರಮಿಕ ಹಾಗೂ ಪಾಲುದಾರಿಕೆ ನ್ಯಾಯ ಒದಗಿಸುವ ಪ್ರಣಾಳಿಕೆಯನ್ನು ಪಕ್ಷ ಬಿಡುಗಡೆಗೊಳಿಸಿದೆ ಎಂದ ಅವರು, ದೇಶವನ್ನು ಜಾತ್ಯಾತೀತ ಹಾಗೂ ಸಮರ್ಥವಾಗಿ ಕಟ್ಟುವ ಶಕ್ತಿ ಮತದಾರರು ಒದಗಿಸಿಕೊಡಬೇಕು ಎಂದು ಹೇಳಿದರು.ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ದೇಶಾದ್ಯಂತ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿವೆ. ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮನಸ್ಸು ಒಡೆಯುವ, ಧರ್ಮಗಳ ನಡುವೆ ಹತ್ತಿಕ್ಕುವ ಮೂಲಕ ಮತಗಳನ್ನು ಗಳಿಸುತ್ತಿದೆ. ಆದರೆ, ಕಾಂಗ್ರೆಸ್ ಬಡವರು, ಮಧ್ಯಮ ಹಾಗೂ ದೀನದಲಿತರ ಬದುಕನ್ನು ಕಟ್ಟಿಕೊಡುವ ಮೂಲಕ ಮತ ಕೇಳುತ್ತಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ತಾಲೂಕಿನ ಇಂದಾವರ, ಹಿರೇಕೊಳಲೆ, ಅಲ್ಲಂಪುರ, ದಾಸರಹಳ್ಳಿ, ತೊಗರಿಹಂಕಲ್ ಹಾಗೂ ಬೀಕನಹಳ್ಳಿ ಪಂಚಾಯಿತಿ ವ್ಯಾಪ್ತಿಗಳಲ್ಲಿ ಏ.20 ರಿಂದ ಪ್ರಚಾರ ಕಾರ್ಯಕ್ರಮ ನಡೆಸಲಾಗುವುದು. ಆಯಾ ಭಾಗದ ಮುಖಂಡರು ಪ್ರಚಾರದಲ್ಲಿ ತೊಡಗಿ ಅಭ್ಯರ್ಥಿಗೆ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಪಕ್ಷದ ಜಿಲ್ಲಾ ವಕ್ತಾರ ರೂಬೆನ್ ಮೋಸಸ್, ಮುಖಂಡರಾದ ತನೋಜ್ ನಾಯ್ಡು, ಕೆ.ಮಹಮ್ಮದ್, ಹೋಬಳಿ ಅಧ್ಯಕ್ಷರಾದ ನಾಗಭೂಷಣ್, ನಾಗೇಶ್, ಜಯರಾಮ್ ಇದ್ದರು.19 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಪ್ರಮುಖರ ಸಭೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿದರು.