ಮುಖ್ಯ ಆಸ್ತಿ ವಿವರ) ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಒಟ್ಟು ಆಸ್ತಿಯ ಶೇ.85ರಷ್ಟು ಸಾಲ!

KannadaprabhaNewsNetwork |  
Published : Apr 04, 2024, 01:01 AM IST
ಆರ್‌. ಪದ್ಮರಾಜ್‌ | Kannada Prabha

ಸಾರಾಂಶ

ಬುಧವಾರ ನಾಮಪತ್ರ ಸಲ್ಲಿಸಿರುವ ಪದ್ಮರಾಜ್‌, ತಮ್ಮ ಅಫಿದವಿತ್‌ನಲ್ಲಿ ಸಂಪೂರ್ಣ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್‌. ಪದ್ಮರಾಜ್‌ ಅವರ ಬಳಿ ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 1,48,01,445 ರು. ಮೌಲ್ಯದ ಆಸ್ತಿ ಇದ್ದರೆ, 1,26,50,000 ರು. ಸಾಲವೇ ಇದೆ!

ಬುಧವಾರ ನಾಮಪತ್ರ ಸಲ್ಲಿಸಿರುವ ಪದ್ಮರಾಜ್‌, ತಮ್ಮ ಅಫಿದವಿತ್‌ನಲ್ಲಿ ಸಂಪೂರ್ಣ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಪದ್ಮರಾಜ್‌ ತಮ್ಮ ಕೈಯಲ್ಲಿ 1,40,000 ರು. ಹಣ ಹೊಂದಿದ್ದರೆ, ಅವರ ಪತ್ನಿ ಬಳಿ 89,000 ರು. ಇದೆ. ಪದ್ಮರಾಜ್‌ 219 ಗ್ರಾಂ ತೂಕದ 12,40,000 ರು. ಮೌಲ್ಯದ ಚಿನ್ನ ಹೊಂದಿದ್ದರೆ, ಅವರ ಪತ್ನಿ 33,00,000 ರು. ಮೌಲ್ಯದ ಚಿನ್ನಾಭರಣ ಇದೆ. ಒಟ್ಟು 64,91,444 ರು. ಚರಾಸ್ತಿಯನ್ನು ಪದ್ಮರಾಜ್‌ ಹೊಂದಿದ್ದರೆ, ಅವರ ಪತ್ನಿ ಬಳಿ 35,36,141 ರು. ಚರಾಸ್ತಿ ಇರುವುದಾಗಿ ಉಲ್ಲೇಖಿಸಿದ್ದಾರೆ.

ಉಳಿದಂತೆ ವಾಣಿಜ್ಯ ಕಟ್ಟಡ, ಮನೆ ಸೇರಿ 83,10,000 ರು. ಸ್ಥಿರಾಸ್ತಿಯನ್ನು ಪದ್ಮರಾಜ್‌ ಹೊಂದಿದ್ದರೆ, ಅವರ ಪತ್ನಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. 37 ಲಕ್ಷ ರು. ಮೌಲ್ಯದ ಇನ್ನೋವಾ ಹೈಬ್ರಿಡ್‌ ಕಾರು ಹೊಂದಿದ್ದಾರೆ. ಕಾರಿನ ಸಾಲ 29,50,000 ರು. ಇದ್ದರೆ, ಉಳಿದ ಸಾಲಗಳು ಸೇರಿ ಒಟ್ಟು 1,26,50,000 ರು. ಸಾಲ ಹೊಂದಿದ್ದಾರೆ.

ಬಿಎ, ಎಲ್‌ಎಲ್‌ಬಿ ಪದವೀಧರರಾಗಿರುವ ಪದ್ಮರಾಜ್‌ ಅವರಿಗೀಗ 53 ವರ್ಷ ವಯಸ್ಸು. ಅಡ್ವೊಕೇಟ್‌ ಮತ್ತು ನೋಟರಿಯೂ ಆಗಿದ್ದಾರೆ. ಅವರ ಪತ್ನಿ ಶಿಕ್ಷಕಿ. ಪ್ರೀತಿ ಹಂಚೋ ಕೆಲಸ ಮಾಡ್ತೇವೆ, ದ್ವೇಷವನ್ನಲ್ಲ: ಪದ್ಮರಾಜ್‌

ಮಂಗಳೂರು: ಈ ಚುನಾವಣೆಯಲ್ಲಿ, ಅದರ ಬಳಿಕವೂ ಜನರಲ್ಲಿ ಪ್ರೀತಿ ಹಂಚುವ ಕೆಲಸ ಮಾಡಲಿದ್ದೇವೆಯೇ ಹೊರತು, ಯಾರ ಬಗ್ಗೆಯೂ ದ್ವೇಷ ಮಾಡಲು, ಟೀಕೆ ಮಾಡಲು ಹೋಗಲ್ಲ. ನೈಜ ವಿಚಾರಗಳನ್ನು ಮತದಾರರ ಮುಂದಿಡಲಿದ್ದೇವೆ. ಜತೆಗೆ ಕಾಂಗ್ರೆಸ್‌ ಸರ್ಕಾರ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಲಿದ್ದೇವೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪದ್ಮರಾಜ್‌ ಹೇಳಿದ್ದಾರೆ.ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮರಸ್ಯದಿಂದ ಕೂಡಿದ್ದ ಜಿಲ್ಲೆಯಲ್ಲಿ ಕಳೆದ 33 ವರ್ಷಗಳಿಂದ ಜಾತಿ- ಧರ್ಮಗಳ ನಡುವೆ ಕಂದಕ ಏರ್ಪಟ್ಟು, ಕೋಮು ಸೂಕ್ಷ್ಮ ಎನ್ನುವ ಟ್ಯಾಗ್‌ ಬಿದ್ದಿದೆ. ಇದರಿಂದಾಗಿ ಜಿಲ್ಲೆಗೆ ಉದ್ದಿಮೆಗಳು ಬರುತ್ತಿಲ್ಲ. ಇದರ ಸ್ಪಷ್ಟ ಅರಿವು ಮತದಾರರಿಗೆ ಆಗಿದೆ. ಜಿಲ್ಲೆಯಲ್ಲಿ ಆರಂಭಿಕ 40 ವರ್ಷ ಕಾಲ ಕಾಂಗ್ರೆಸ್‌ ಸಂಸದರು ಮಾಡಿದ ಸಾಧನೆಗಳು, ಅದರ ನಂತರ 34 ವರ್ಷಗಳಲ್ಲಿ ಬಿಜೆಪಿ ಎಂಪಿಗಳು ಏನು ಮಾಡಿದ್ದಾರೆ ಎಂಬ ನಮ್ಮ ಪ್ರಶ್ನೆಗೆ ಇದುವರೆಗೂ ಉತ್ತರ ಕೊಟ್ಟಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೂಪಾ ಮೌದ್ಗಿಲ್‌ ಮಾನಹಾನಿ ಕೇಸ್‌: ರೋಹಿಣಿ ಅರ್ಜಿ ವಜಾ
ವಿರೋಧದ ನಡುವೆ ಮದುವೆ : ಸಿಟ್ಟಲ್ಲಿ ಅಳಿಯನ ಮನೆಗೆ ಮಾವನಿಂದ ಬೆಂಕಿ!