ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಮುಖಂಡರು ಕರೆ ನೀಡಿದ್ದಾರೆ.
ಸಂಡೂರು: ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಮುಂಬರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಹೇಳಿದರು.
ತಾಲೂಕಿನ ಕೃಷ್ಣಾನಗರದಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮುಂಬರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ತನ್ನ ದುರಾಡಳಿತದಿಂದ ತನ್ನ ಅಧಿಕಾರ ಕಳೆದುಕೊಂಡಿದೆ. ಈ ಹಿಂದೆ ಜಿಲ್ಲೆಯಲ್ಲಿ ಅಟ್ಟಹಾಸದಿಂದ ಮೆರೆದವರು ಜಿಲ್ಲೆಯಲ್ಲಿ ನಿಲ್ಲಲಾರದಂತಹ ಪರಿಸ್ಥಿತಿ ಉಂಟಾಯಿತು. ಬಿಜೆಪಿಯವರು ಮಾಡಿದ ಅನ್ಯಾಯದಿಂದಾಗಿ ಸೋತು ಸುಣ್ಣವಾಗಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರೂ ರಾಜ್ಯಕ್ಕೆ ಯಾವ ಕೊಡುಗೆ ನೀಡಿಲ್ಲ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಜನತೆಗೆ ವಿವಿಧ ಭಾಗ್ಯಗಳನ್ನು ನೀಡುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ಎಐಸಿಸಿ ಇನ್‌ಚಾರ್ಜ್ ಮಯೂರ್ ಜಯಕುಮಾರ್ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಬಲಪಡಿಸಬೇಕು. ಸಂಡೂರು ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರೂ, ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಪ್ರಾಮಾಣಿಕವಾಗಿ ಒಟ್ಟಾಗಿ ಶ್ರಮಿಸಿದರೆ, ಪಕ್ಷದ ಅಭ್ಯರ್ಥಿ ಗೆಲುವು ಖಚಿತವಾಗಲಿದೆ. ಕ್ಷೇತ್ರದಲ್ಲಿನ ೨೪೧ ಬೂತ್‌ಗಳಿಗೆ ೫೨ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.
ಸಂಸದ ಈ. ತುಕಾರಾಂ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಜನತೆ ಪ್ರೀತಿ, ವಿಶ್ವಾಸದಿಂದ ನಾಲ್ಕು ಬಾರಿ ನನ್ನನ್ನು ಶಾಸಕನಾಗಿ, ಈ ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿದ್ದಾರೆ. ಬೇರೆ ಪಕ್ಷದ ಕರಿನೆರಳು ಕ್ಷೇತ್ರದ ಮೇಲೆ ಬೀಳದಂತೆ ಕ್ರಮ ಕೈಗೊಳ್ಳಬೇಕಿದೆ. ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ವಿನಯಕುಮಾರ್ ಸೊರಕೆ, ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ, ಮಾಜಿ ಕೆಪಿಸಿಸಿ ಸದಸ್ಯ ವೆಂಕಟರಾವ್ ಘೋರ್ಪಡೆ ಮುಂತಾದವರು ಮಾತನಾಡಿ, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಟಿ.ಲಕ್ಷ್ಮಣ ಹಾಗೂ ಶಿವರಾಮಪ್ಪ ರಾಗಿಯವರು ಪಕ್ಷದ ಟಿಕೆಟ್ ಬಯಸಿ ಎಐಸಿಸಿ ಇನ್‌ಚಾರ್ಜ್ ಹಾಗೂ ಕೆಪಿಸಿಸಿ ಕಾಯಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಎಐಸಿಸಿ ಹಾಗೂ ಕೆಪಿಸಿಸಿ ಮುಖಂಡರ ನೇತೃತ್ವದಲ್ಲಿ ಬಿಜೆಪಿಯ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಮೇಘನಾಥ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬ್ರಪ್ಪ ಸ್ವಾಗತಿಸಿದರು. ಪಕ್ಷದ ಬಳ್ಳಾರಿ ಗ್ರಾಮೀಣ ಅಧ್ಯಕ್ಷರಾದ ಬಿ.ವಿ. ಶಿವಯೋಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಮುಜಾಮಿಲ್ ಹುಸೇನ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್ ಕುಮಾರ್, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಲತಾ ಎಂ.ಸಿ. ಉಜ್ಜಪ್ಪ, ಆಶಾಲತಾ ಸೋಮಪ್ಪ, ಮಂಜುಳಾ ನಾಯ್ಡು, ಉಮಾಯೂನ್ ಖಾನ್, ಅಲ್ಲಂ ಪ್ರಶಾಂತ್, ಮಲ್ಲಿಕಾರ್ಜುನ, ಜೆ.ಎಂ. ವೃಷಬೇಂದ್ರಸ್ವಾಮಿ, ಮಹಮ್ಮದ್ ರಫೀಕ್, ಫಕೃದ್ದೀನ್ ಅಲಿ, ಪಕ್ಷದ ಪುರಸಭೆ ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.